ಕರ್ನಾಟಕ

ಡ್ರೋನ್‌ ಬದಲು ರೈತನ ಬೆಳೆಗಳ ಮೇಲೆ ನಿಗಾ ಇಡಲಿವೆ ಲೋಹದ ಹಕ್ಕಿಗಳು!

Pinterest LinkedIn Tumblr


ಬೆಂಗಳೂರು: ಬೆಳೆಗಳ ನಿರ್ವಹಣೆಗೆ ಬಳಸುವ ಡ್ರೋನ್‌ ಹಳೆಯದಾಯಿತು. ಈಗ ಲೋಹದ ಹಕ್ಕಿಗಳ ನೆರವಿನಿಂದ ಬೆಳೆಗಳ ಆರೋಗ್ಯದ ಮೇಲೆ ನಿಗಾ ಇಡುವ ವ್ಯವಸ್ಥೆ ಬರುತ್ತಿದೆ!

ವಿಮಾನಗಳಲ್ಲಿ ಮಲ್ಟಿ ಸ್ಪೆಕ್ಟರಲ್‌ ಕೆಮರಾಗಳನ್ನು ಅಳವಡಿಸಿ ಜಮೀನುಗಳ ಚಿತ್ರಗಳನ್ನು ಸೆರೆ ಹಿಡಿಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಈ ಚಿತ್ರಗಳು ಡ್ರೋನ್‌ಗಿಂತ ಹೆಚ್ಚು ನಿಖರವಾಗಿರುತ್ತವೆ. ಜತೆಗೆ ಎತ್ತರದಲ್ಲಿ ಹಾರಾಟ ಮಾಡುವುದರಿಂದ ಅಲ್ಪಾವಧಿಯಲ್ಲಿ ಅಧಿಕ ಪ್ರದೇಶ ಸುತ್ತುಹಾಕಿ ಮಾಲಕರಿಗೆ ಈ “ಹಕ್ಕಿ’ ವರದಿ ಒಪ್ಪಿಸಲಿದೆ.

ಡ್ರೋನ್‌ ಅಬ್ಬಬ್ಟಾ ಎಂದರೆ ನೆಲದಿಂದ 400 ಅಡಿ ಎತ್ತರದಲ್ಲಿ ಹಾರಾಟ ನಡೆಸಬಲ್ಲದು. ಅದಕ್ಕಿಂತ ಎತ್ತರಕ್ಕೆ ಹೋಗಲು ಅವಕಾಶ ಇಲ್ಲ. ಆದರೆ ವಿಮಾನ ನಾಲ್ಕು ಸಾವಿರ ಅಡಿ ಎತ್ತರದವರೆಗೂ ಹಾರಾಟ ನಡೆಸುತ್ತದೆ. ಹಾಗಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದೇಶದ ಬೆಳೆಯ ಮಾಹಿತಿ ನೀಡಬಹುದು. ಅದು ಭೂಮಿಯ ಮೇಲ್ಮೈಯಿಂದ ಕೇವಲ 1 ಮೀಟರ್‌ ಪಿಕ್ಸೆಲ್‌ನಲ್ಲಿ ಬೆಳೆಗಳ ಚಿತ್ರವನ್ನು ಸೆರೆಹಿಡಿಯುತ್ತದೆ. ಅದನ್ನು ವಿಶ್ಲೇಷಣೆ ಮಾಡಿ ಅಗತ್ಯ ಕ್ರಮ ಕೈಗೊಳ್ಳ ಬಹುದು ಎಂದು ಅಮೆರಿಕ ಮೂಲದ ವಿರಿಡಿಸ್‌ ಆರ್‌ಎಸ್‌ ಲಿ., ಸಂಸ್ಥಾಪಕ ಹಾಗೂ ಹಿರಿಯ ವಿಜ್ಞಾನಿ ಮಾರ್ಕ್‌ ಜಾನೆಟ್‌ ತಿಳಿಸಿದರು.

ಅರಮನೆ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಮಂಗಳವಾರ “ಇಂಟಲಿ ಜೆಂಟ್‌ ಸಿಸ್ಟಮ್ಸ್‌ ಇನ್‌ ಅಗ್ರಿಕಲ್ಚರ್‌’ (ಕೃಷಿಯಲ್ಲಿ ಚತುರ ವ್ಯವಸ್ಥೆಗಳ ಪ್ರಯೋಗ) ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಅನಂತರ “ಉದಯವಾಣಿ’ಯೊಂದಿಗೆ ಅವರು ಮಾತನಾಡಿದರು. ವಾರದಲ್ಲಿ 1.50 ಲಕ್ಷ ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆಗಳ ಚಿತ್ರಣವನ್ನು ನೀಡುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಇದೇ ಅವಧಿಯಲ್ಲಿ ಇಷ್ಟೊಂದು ಪ್ರದೇಶದ ನಿರ್ವಹಣೆಗೆ 35 ಡ್ರೋನ್‌ಗಳು ಬೇಕಾಗುತ್ತವೆ. ಸಾಮಾನ್ಯ ವಿಮಾನಗಳಿಗಿಂತ ಕೃಷಿ ನಿರ್ವಹಣೆಗಾಗಿ ಪರಿಚಯಿಸಿದ ಲೋಹದಹಕ್ಕಿಯ ವಿನ್ಯಾಸ ತುಸು ಭಿನ್ನವಾಗಿರುತ್ತದೆ. ಇದರ ರೆಕ್ಕೆಗಳಿಗೆ ಕೆಮರಾಗಳನ್ನು ಅಳವಡಿಸಲಾಗಿರುತ್ತದೆ. ಇದರ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ದ ಅನುಮತಿ ಕಡ್ಡಾಯ. ಇದು ನಮಗೆ ಪ್ರಸ್ತುತ ಸವಾಲಾಗಿದ್ದು, ಸ್ಥಳೀಯ ಸರಕಾರಗಳ ನೆರವಿನಿಂದ ಇದರ ಅನುಮತಿ ದೊರೆಯುವ ವಿಶ್ವಾಸವಿದೆ ಎಂದು ಮಾರ್ಕ್‌ ಹೇಳಿದರು.

ಮಹಾರಾಷ್ಟ್ರ, ಗುಜರಾತ್‌ ಆಸಕ್ತಿ
ಸಣ್ಣಹಿಡುವಳಿದಾರರಿಗೆ ಇದು ಅನುಕೂಲ ಆಗುವುದಿಲ್ಲ. ದೊಡ್ಡ ಹಿಡುವಳಿದಾರರು ಒಟ್ಟಾಗಿ ಮಾಡಬಹುದು ಅಥವಾ ಸರಕಾರವು ಇದಕ್ಕೆ ಆಸಕ್ತಿ ತೋರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ಸರಕಾರಗಳು ಮುಂದೆಬಂದಿವೆ. ಆದರೆ ಪ್ರಯೋಗಕ್ಕೆ ನಿರ್ದಿಷ್ಟ ಪ್ರದೇಶವನ್ನು ಇನ್ನೂ ಗುರುತಿಸಿಲ್ಲ. ಯಾವ ಬೆಳೆಗಳ ನಿರ್ವಹಣೆ ಬೇಕಾದರೂ ಮಾಡಬಹುದು. ಸದ್ಯಕ್ಕೆ ಹತ್ತಿ, ದ್ರಾಕ್ಷಿ ಮತ್ತಿತರ ಬೆಳೆಗಳ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆದಿದೆ ಎಂದೂ ಅವರು ಸ್ಪಷ್ಟಪಡಿಸಿದರು.

ಸಣ್ಣ ಮಾಹಿತಿಯೂ ಲಭ್ಯ
ಬೆಳೆಗಳ ಆರೋಗ್ಯ ಮತ್ತಿತರ ನಿರ್ವಹಣೆಗಿಂತ ಮುಖ್ಯವಾಗಿ ಬೆಳೆ ವಿಮೆ ಸೌಲಭ್ಯಕ್ಕೆ ಇದನ್ನು ಬಳಸುವುದು ನಮ್ಮ ಆದ್ಯತೆಯಾಗಿದೆ. ನಾವು ಅಭಿವೃದ್ಧಿಪಡಿಸಿರುವ ವಿಮಾನದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಯಾದ ಎಲ್ಲ ಜಮೀನಿನ ಮಾಹಿತಿಯನ್ನೂ ಪಡೆಯಲು ಸಾಧ್ಯವಿದೆ. ಈ ಹೊಸ ವ್ಯವಸ್ಥೆಯಲ್ಲಿ ಕನಿಷ್ಠ 10×10 ಮೀಟರ್‌ನಲ್ಲಿ ಬೆಳೆದ ಮಾಹಿತಿಯನ್ನೂ ಪಡೆಯಬಹುದು ಎಂದು ಮಾರ್ಕ್‌ ಅವರು ಹೇಳಿದರು.

Comments are closed.