ಮುಂಬೈ

ಮಹಾರಾಷ್ಟ್ರ; ಇಂದು 10.30ಕ್ಕೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

Pinterest LinkedIn Tumblr


ನವದೆಹಲಿ (ನ. 25): ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಒಪ್ಪಂದ ಮಾಡಿಕೊಂಡು ಬೆಳಗ್ಗೆ 8 ಗಂಟೆಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಅಜಿತ್ ಪವಾರ್ ಕ್ರಮಕ್ಕೆ ವಿರೋಧಗಳು ವ್ಯಕ್ತವಾಗಿತ್ತು. ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದ ರಾಜ್ಯಪಾಲ ಕೊಶ್ಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ತೀರ್ಪನ್ನು ಮುಂದೂಡಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ವಿಚಾರವಾಗಿ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಕಾಂಗ್ರೆಸ್, ಶಿವಸೇನೆ, ಎನ್​ಸಿಪಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ಅಂತ್ಯವಾಗಿದ್ದು, ಫಡ್ನವಿಸ್ ಸರ್ಕಾರಕ್ಕೆ 24 ಗಂಟೆಗಳ ಕಾಲ ಜೀವದಾನ ಸಿಕ್ಕಂತಾಗಿದೆ. ಇಂದು ತೀರ್ಪು ಹೊರಬಿದ್ದ ನಂತರ ವಿಶ್ವಾಸಮತ ಯಾಚನೆ ಯಾವಾಗ ಎಂಬುದು ಗೊತ್ತಾಗಲಿದೆ.

24 ಗಂಟೆಯೊಳಗೆ ವಿಶ್ವಾಸ ಮತ ಯಾಚನೆ ಮಾಡಬೇಕೆಂದು ಆದೇಶಿಸಿ ಎಂದು ಕೋರಿ ತ್ರಿಪಕ್ಷಗಳು ಅರ್ಜಿ ಸಲ್ಲಿಸಿದ್ದವು. ನ್ಯಾ. ಎನ್.ವಿ. ರಮಣ, ನ್ಯಾ. ಅಶೋಕ್ ಭೂಷಣ್ ಮತ್ತು ನ್ಯಾ. ಸಂಜೀವ್ ಖನ್ನಾ ಅವರಿರುವ ತ್ರಿಸದಸ್ಯ ಸುಪ್ರೀಂ ನ್ಯಾಯಪೀಠವು ಇಂದು ವಿಚಾರಣೆ ನಡೆಸಿದೆ. ನಿನ್ನೆ ನಡೆದ ವಿಚಾರಣೆಯಲ್ಲಿ ಶಿವಸೇನಾ, ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳ ಪರವಾಗಿ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡಿದ್ದರು. ಮಹಾರಾಷ್ಟ್ರ ಸರ್ಕಾರ ಮತ್ತು ಬಿಜೆಪಿ ಪರ ಇರುವ ಶಾಸಕರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದ್ದರು.

ರಾಜ್ಯಪಾಲರ ಪರ ವಕೀಲರ ವಾದ:

ಇಂದು ಸುಪ್ರೀಂಕೋರ್ಟ್​ನಲ್ಲಿ ಮೊದಲು ವಾದ ಮಂಡಿಸಿದ ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ, ಚುನಾವಣಾ ಫಲಿತಾಂಶ ಪ್ರಕಟವಾಗಿ 1 ತಿಂಗಳಾಗಿದೆ. ನಮ್ಮ ಬಳಿ ಅಸಲಿ ದಾಖಲೆಗಳಿವೆ. ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ. ಸರ್ಕಾರ ರಚನೆ ಸಂಬಂಧಿ ದಾಖಲೆಗಳು ನಮ್ಮ ಬಳಿ ಇವೆ. ಶಿವಸೇನೆಗಿಂತಲೂ ಬಿಜೆಪಿ ಅತಿದೊಡ್ಡ ಪಕ್ಷವಾಗಿದೆ. ವಿಸ್ತೃತ ವರದಿ ಸಲ್ಲಿಕೆಗೆ ಕಾಲಾವಕಾಶ ಬೇಕು. ಕುದುರೆವ್ಯಾಪಾರದ ಪ್ರಶ್ನೆಯೇ ಇಲ್ಲ. ಸರ್ಕಾರ ರಚನೆಗೆ ಯಾವ ಪಕ್ಷವೂ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿಲ್ಲ. ರಾಜ್ಯಪಾಲರು ಬಹಳ ದಿನ ಕಾದಿದ್ದರು. ಯಾವ ಪಕ್ಷವೂ ಬಾರದ ಹಿನ್ನೆಲೆಯಲ್ಲಿ ಕೊನೆಗೆ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಶಿಫಾರಸು ಮಾಡಿದ್ದರು.

ಆದರೆ, ನ.22ರಂದು ಎನ್​ಸಿಪಿಯ ಅಜಿತ್ ಪವಾರ್ ಬಿಜೆಪಿಗೆ ಬೆಂಬಲ ನೀಡಿದ್ದರು. 54 ಶಾಸಕರ ಸಹಿ ಇರುವ ಪತ್ರ ನೀಡಿದ್ದರು. ಈ ಪತ್ರದ ಆಧಾರದಲ್ಲಿ ರಾಜ್ಯಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಪತ್ರವನ್ನು ಕೋರ್ಟ್​ಗೆ ನೀಡಿದ್ದೇವೆ ಎಂದು ಹೇಳಿದ ವಕೀಲ ತುಷಾರ್ ಮೆಹ್ತಾ ಅಜಿತ್ ಪವಾರ್ ನೀಡಿದ್ದ ಪತ್ರ ಓದಿ, ಬೆಂಬಲಿಗರ ಹೆಸರನ್ನು ಕೂಡ ಬಹಿರಂಗಪಡಿಸಿದರು. 170 ಶಾಸಕರ ಬೆಂಬಲವಿರುವ ಪತ್ರದ ಜೊತೆಗೆ 2 ದಾಖಲೆಗಳನ್ನು ತುಷಾರ್ ಮೆಹ್ತಾ ಕೋರ್ಟ್​ಗೆ ಸಲ್ಲಿಸಿದರು.

ವಿಶ್ವಾಸಮತಕ್ಕೆ ರಾಜ್ಯಪಾಲರು ದಿನಾಂಕ ನಿಗದಿಪಡಿಸಿದ್ದಾರೆ. ಅದರಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಎನ್​ಸಿಪಿಯದ್ದು ಕೌಟುಂಬಿಕ ಜಗಳ. ಎನ್​ಸಿಪಿಯ ಒಬ್ಬ ನಾಯಕ ಬಿಜೆಪಿ ಜೊತೆಗಿದ್ದಾರೆ. ಇನ್ನೊಬ್ಬ ನಾಯಕ ಶಿವಸೇನೆ, ಕಾಂಗ್ರೆಸ್ ಜೊತೆ ಕೈಜೋಡಿಸಲು ಸಿದ್ಧರಾಗಿದ್ದಾರೆ ಎಂದು ರಾಜ್ಯಪಾಲರ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.

ಬಿಜೆಪಿ ಪರ ವಕೀಲರ ವಾದ:

ನಂತರ ವಾದ ಆರಂಭಿಸಿದ ಸಿಎಂ ದೇವೇಂದ್ರ ಫಡ್ನವಿಸ್ ಪರ ವಕೀಲ ಮುಕುಲ್ ರೋಹ್ಟಗಿ, ಶರದ್ ಪವಾರ್ ಅವರಿಂದ ಕುದುರೆ ವ್ಯಾಪಾರವಾಗುತ್ತಿದೆ. ಎನ್​ಸಿಪಿ ಶಾಸಕರನ್ನು ಶರದ್ ಪವಾರ್ ತಮ್ಮತ್ತ ಸೆಳೆಯುತ್ತಿದ್ದಾರೆ ಎಂದಿದ್ದಾರೆ. ದೇವೇಂದ್ರ ಫಡ್ನವಿಸ್​ ಅವರಿಗೆ ಬಹುಮತ ಸಾಬೀತುಪಡಿಸಲು 14 ದಿನ ಕಾಲಾವಕಾಶ ನೀಡಿ ಎಂದು ಮುಕುಲ್ ರೋಹ್ಟಗಿ ಮನವಿ ಮಾಡಿದ್ದಾರೆ.

ಡಿಸಿಎಂ ಅಜಿತ್ ಪವಾರ್ ಪರ ಮಣೀದರ್ ಸಿಂಗ್ ವಾದ ಮಂಡಿಸಿದ್ದಾರೆ. ನಾನು ಎನ್​ಸಿಪಿಯನ್ನು ಪ್ರತಿನಿಧಿಸುತ್ತೇನೆ. ನಾವು ಎಲ್ಲಾ ಆಂತರಿಕ ಜಗಳಗಳನ್ನು ನಿವಾರಿಸುತ್ತೇವೆ. ಎನ್​ಸಿಪಿಯ ಆಂತರಿಕ ಒಡಕನ್ನು ಬಗೆಹರಿಸುತ್ತೇವೆ. ನಾವು ಕ್ರಮಬದ್ಧವಾಗಿಯೇ ಬಿಜೆಪಿಯನ್ನು ಬೆಂಬಲಿಸಿದ್ದೇವೆ. ಎನ್​ಸಿಪಿಯ ಮೂರನೇ 1 ಭಾಗದಷ್ಟು ಎನ್​ಸಿಪಿ ಶಾಸಕರು ಫಡ್ನವಿಸ್​ಗೆ ಬೆಂಬಲ ನೀಡಿದ್ದಾರೆ. ರಾಜ್ಯಪಾಲರಿಗೆ ಕೊಟ್ಟ ಬೆಂಬಲ ಪತ್ರ ಸಮರ್ಪಕವಾಗಿದೆ. 54 ಶಾಸಕರ ಬೆಂಬಲ ಪತ್ರ ಸರಿಯಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಪರ ವಕೀಲರ ವಾದ:

ಕಾಂಗ್ರೆಸ್ ಪರ ಕಪಿಲ್ ಸಿಬಲ್ ವಾದ ಮಂಡನೆ ಮಾಡಿದ್ದಾರೆ. ಕುದುರೆ ಇಲ್ಲೇ ಇದೆ, ಸವಾರ ಓಡಿದ್ದಾನೆ. ನ.23ರಂದೇ ಬೆಂಬಲ ಪತ್ರ ನೀಡಬೇಕೆಂದುಕೊಂಡಿದ್ದೆವು. ಆದರೆ ಬೆಳಗ್ಗೆ 5ಕ್ಕೇ ರಾಷ್ಟ್ರಪತಿ ಆಳ್ವಿಕೆ ವಾಪಾಸ್ ತೆಗೆದುಕೊಂಡಿದ್ದಾರೆ. ಬೆಳಗ್ಗೆ 5ಕ್ಕೆ ಈ ನಿರ್ಧಾರ ಕೈಗೊಂಡಿದ್ದೇಕೆ? 54 ಎನ್​ಸಿಪಿ ಶಾಸಕರ ಬೆಂಬಲ ಪತ್ರ ನಮ್ಮಲ್ಲಿತ್ತು. ಉದ್ಧವ್ ಸಿಎಂ ಮಾಡಲು ನಿರ್ಧರಿಸಿದ್ದೆವು. 8 ಗಂಟೆಗೆ ಯಾಕೆ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದರು? ತುರ್ತುಪರಿಸ್ಥಿತಿ ವಾತಾವರಣ ಇತ್ತಾ? ಎಂದು ಕಾಂಗ್ರೆಸ್ ಪರ ಕಪಿಲ್ ಸಿಬಲ್ ಪ್ರಶ್ನೆ ಮಾಡಿದ್ದಾರೆ.

ಬೊಮ್ಮಾಯಿ ಪ್ರಕರಣದಂತೆ 24 ಗಂಟೆಗಳಲ್ಲಿ ವಿಶ್ವಾಸಮತಕ್ಕೆ ಸೂಚಿಸಿ. ಸದನ ಕಲಾಪ ವಿಡಿಯೋ ರೆಕಾರ್ಡ್ ಮಾಡಿ. ನಮಗೆ 154 ಶಾಸಕರ ಬೆಂಬಲವಿದೆ ಎಂದು ಕಪಿಲ್ ಸಿಬಲ್ ಮನವಿ ಮಾಡಿದರು. ಕಾಂಗ್ರೆಸ್ ಪರವಾಗಿಯೇ ವಾದ ಮುಂದುವರೆಸಿದ ಅಭಿಷೇಕ್ ಮನುಸಿಂಘ್ವಿ ತಕ್ಷಣ ಬಹುಮತ ಸಾಬೀತಿಗೆ ಸೂಚಿಸಿ ಎಂದು ಮನವಿ ಮಾಡಿದರು. ಅಜಿತ್ ಪವಾರ್ ಪತ್ರವನ್ನು ರಾಜ್ಯಪಾಲರು ಪರಿಶೀಲಿಸಿಲ್ಲ.ಕವರಿಂಗ್ ಲೆಟರ್ ಇಲ್ಲದೆ ಶಾಸಕರ ಸಹಿ ಪಡೆಯಲಾಗಿದೆ. ಅದೊಂದು ನಕಲಿ ಪತ್ರ. ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಎನ್​ಸಿಪಿಯ 40 ಶಾಸಕರ ಬೆಂಬಲವಿದೆ. ಇದಕ್ಕೆ ಪೂರಕ ಪ್ರಮಾಣಪತ್ರ ಇದೆ ಎಂದು ಸಿಂಘ್ವಿ ಹೇಳಿದರು.

ಪ್ರಮಾಣಪತ್ರ ಎಲ್ಲಿದೆ ತೋರಿಸಿ ಎಂದು ಮರ್ಧಯ ಪ್ರವೇಶಿದ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಅವರಿಗೆ ತಿರುಗೇಟು ನೀಡಿದ ಅಭಿಷೇಕ್ ಮನುಸಿಂಘ್ವಿ ಇದು ಅಸೆಂಬ್ಲಿ ಅಲ್ಲ, ಕೂತ್ಕೊಳಿ ಎಂದರು. ಪ್ರಮಾಣಪತ್ರ ಪರಿಶೀಲನೆಗೆ ಕೋರ್ಟ್ ನಕಾರ ಸೂಚಿಸಿತು. ಶಿವಸೇನೆ ಮೈತ್ರಿಯ ಪತ್ರವನ್ನು ನಾವು ಪರಿಶೀಲಿಸುವುದಿಲ್ಲ. ಸುಮ್ಮನೆ ಪ್ರಕರಣ ಬೆಳೆಸಬೇಡಿ ಎಂದು ಸುಪ್ರೀಂಕೋರ್ಟ್​ ಸೂಚಿಸಿತು. ಶಾಸಕರನ್ನು ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ. ದಯವಿಟ್ಟು ಶಾಸಕರಿಗೆ ರಕ್ಷಣೆ ಕೊಡಿ ಎಂದು ಕಾಂಗ್ರೆಸ್ ವಕೀಲ ಅಭಿಷೇಕ್ ಮನುಸಿಂಘ್ವಿ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದರು.

Comments are closed.