ಆರೋಗ್ಯ

ಚೊಚ್ಚಲ ಗರ್ಭಿಣಿಯರಿಗೆ `ಮಾತೃವಂದನ’ ಪ್ರೋತ್ಸಾಹಧನ ಯೋಜನೆಯಡಿ 5 ಸಾವಿರ-ನೋಂದಣಿ ಹೀಗೆ ಮಾಡಿ

Pinterest LinkedIn Tumblr

ವಿಶೇಷ ವರದಿ: ಚೊಚ್ಚಲ ಬಾರಿಗೆ ಗರ್ಭಿಣಿಯಾಗುವ ಮಹಿಳೆ ಮತ್ತು ಮಗುವಿನ ಆರೋಗ್ಯದ ದೃಷ್ಠಿಯಿಂದ, ಪ್ರೋತ್ಸಾಹಧನ ರೂಪದಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಮಾತೃವಂದನ ಯೋಜನೆಯನ್ನು ಜಾರಿಗೆ ತಂದಿದ್ದು, ಮೊದಲನೆ ಬಾರಿ ತಾಯಿಯಾಗುವ ಮಾತೆಯರಿಗೆ ಮೂರು ಕಂತಿನಲ್ಲಿ 5000 ರೂ. ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುವುದು. ಈ ಯೋಜನೆಯು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿದೆ.

ಯೋಜನೆಗೆ ಅರ್ಹರಾಗಲು ಫಲಾನುಭವಿ ಮಹಿಳೆಯು ಮೊದಲನೆ ಬಾರಿ ತಾಯಿಯಾಗುತ್ತಿರಬೇಕು. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ ಹೊಂದಿರುವ ಕುಟುಂಬದ ಮಹಿಳೆಯರು ಸಹ ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು, ಕೇಂದ್ರ/ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಯೋಜನೆಯ ಪ್ರಯೋಜನ ಪಡೆಯಬಹುದು.

ನೊಂದಣಿ ವಿಧಾನ : ಗರ್ಭಿಣಿ ಮಹಿಳೆಯರು ತಮ್ಮ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನೊಂದಣಿ ಮಾಡಿಕೊಳ್ಳಬೇಕು.
ಮೊದಲನೇ ಕಂತಿನ ಅನುದಾನ ಪಡೆಯಲು ತನ್ನ ಮತ್ತು ಗಂಡನ ಆಧಾರ್ ಕಾರ್ಡ್ನ ಪ್ರತಿ, ಮೊಬೈಲ್ ಸಂಖ್ಯೆ, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್ನ ಪ್ರತಿ, ಬ್ಯಾಂಕ್/ಅಂಚೆ ಕಚೇರಿಯ ವಿವರಗಳೊಂದಿಗೆ ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ ನೀಡಬೇಕು. ಮೊದಲ ಹಂತದಲ್ಲಿ ರೂ. 1000 ಗಳ ಪ್ರೋತ್ಸಾಹಧನ ನೇರವಾಗಿ ಮಹಿಳೆಯ ಖಾತೆಗೆ ಜಮೆ ಆಗಲಿದೆ. ಮಹಿಳೆ ಗರ್ಭಿಣಿ ಆದ 150 ದಿನದಲ್ಲಿ ಈ ಪ್ರೋತ್ಸಾಹ ಧನ ದೊರೆಯಲಿದೆ.
2 ನೇ ಕಂತಿನ ಪ್ರೋತ್ಸಾಹ ಧನ ಪಡೆಯಲು, ಕನಿಷ್ಠ ಒಂದು ಬಾರಿ ಅರೋಗ್ಯ್ಯ ತಪಾಸಣೆ ನಡೆಸಿರಬೇಕು, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್ನ ಪ್ರತಿ ನೀಡಬೇಕು. ಗರ್ಭಿಣಿ ಆದ 180 ದಿನದಲ್ಲಿ ರೂ.2000 ಗಳ ಪ್ರೋತ್ಸಾಹ ಧನ ನೇರವಾಗಿ ಮಹಿಳೆಯ ಖಾತೆಗೆ ಜಮೆ ಆಗಲಿದೆ.
3 ನೇ ಹಾಗೂ ಕೊನೆಯ ಹಂತದ ಅನುದಾನ ಪಡೆಯಲು ಮಗುವಿನ ಜನನ ಪ್ರಮಾಣಪತ್ರ ಮತ್ತು ಮಗುವಿಗೆ ಚುಚ್ಚುಮದ್ದು ನೀಡಿರುವ ಮಾಹಿತಿಯೊಂದಿಗೆ ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್ನ ಪ್ರತಿ ನೀಡಬೇಕು, ರೂ.2000 ಗಳ ಪ್ರೋತ್ಸಾಹ ಧನ ನೇರವಾಗಿ ಮಹಿಳೆಯ ಖಾತೆಗೆ ಜಮೆ ಆಗಲಿದೆ. ಹಾಗೂ ಜನನಿ ಸುರಕ್ಷಾ ಯೋಜನೆಯಡಿ ರೂ.1000 ಗಳ ಹೆಚ್ಚುವರಿ ಪ್ರೋತ್ಸಾಹ ಧನ ಕೂಡಾ ದೊರೆಯಲಿದೆ. ಗರ್ಭ ಧರಿಸಿದ ಅವಧಿಯಿಂದ ಹೆರಿಗೆಯವರೆಗೆ ಒಟ್ಟು ನಾಲ್ಕು ಕಂತಿನಲ್ಲಿ 6000 ರೂಪಾಯಿಗಳನ್ನು ನೇರವಾಗಿ ಮಾತೆಯರ ಖಾತೆಗೆ ವರ್ಗಾಯಿಸಲಾಗುವುದು.

ಡಿಸೆಂಬರ್ 2 ರಿಂದ 8 ರ ವರೆಗೆ ಜಿಲ್ಲೆಯಾದ್ಯಂತ ಮಾತೃವಂದನಾ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಗರ್ಭಿಣಿ ಮಹಿಳೆಯರ ನೊಂದಣಿ ಕಾರ್ಯ ನಡೆಯುತ್ತಿದೆ. ಗರ್ಭಿಣಿ ಮಹಿಳೆಯರು ತಮ್ಮ ಸಮೀಪದ ಅಂಗನವಾಡಿಗಳಲ್ಲಿ ನೊಂದಣಿ ಮಾಡಿಕೊಂಡು, ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

Comments are closed.