ಲಖನೌ: ವಿವಾದಾತ್ಮಕ ಹೇಳಿಕೆಗಳಿಂದಲೇ ಮುನ್ನೆಲೆಗೆ ಬಂದಿರುವ ವಿಶ್ವ ಹಿಂದು ಪರಿಷದ್ ನಾಯಕಿ ಸಾಧ್ವಿ ಪ್ರಾಚಿ ಈಗ ಮತ್ತೊಂದು ಕಾಂಟ್ರವರ್ಸಿ ಸೃಷ್ಟಿಸಿದ್ದಾರೆ.
ಮೇರಠ್ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಪ್ರಾಚಿ, ರಾಹುಲ್ ಗಾಂಧಿಯವರ ವಿರುದ್ಧ ಕಿಡಿ ಕಾರುತ್ತ, ನಕ್ಸಲಿಸಂ, ಭಯೋತ್ಪಾದನೆ, ಅತ್ಯಾಚಾರಗಳೆಲ್ಲ ನೆಹರೂ ಕುಟುಂಬದಿಂದಲೇ ಬಂದಿದ್ದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪ್ರಾಚಿ ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ಅತ್ಯಾಚಾರ ಹಾಗೂ ಭೀಕರ ಹತ್ಯೆಗೆ ಸಂಬಂಧಪಟ್ಟಂತೆ ಮಾತನಾಡಿದರು.
ಈ ಹಿಂದೆ ರಾಹುಲ್ ಗಾಂಧಿ ಮಾತನಾಡುತ್ತ, ಭಾರತ ಅತ್ಯಾಚಾರದ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಆರೋಪ ಮಾಡಿದ ಪ್ರಾಚಿ ಮೇಲಿನ ವಿವಾದಾತ್ಮಕ ಹೇಳಿಕೆ ನೀಡಿದರು.
ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹತ್ಯೆ ಖಂಡಿಸಿ ಧರಣಿ ನಡೆಸುತ್ತಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿರುದ್ಧವೂ ಸಾಧ್ವಿ ಪ್ರಾಚಿ ತೀವ್ರ ವಾಗ್ದಾಳಿ ನಡೆಸಿದರು.
ಅಖಿಲೇಶ್ ಅಧಿಕಾರದಲ್ಲಿದ್ದಾಗ ಅತ್ಯಾಚಾರಿಗಳನ್ನೆಲ್ಲ ಕಾಪಾಡಿದ್ದಾರೆ. ಈಗ ಪ್ರತಿಪಕ್ಷದಲ್ಲಿ ಇದ್ದಿದ್ದರಿಂದ ಧರಣಿ ಕುಳಿತುಕೊಂಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಮಹಿಳಾ ಪಶುವೈದ್ಯಾಧಿಕಾರಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಕೊಂದ ಹೈದರಾಬಾದ್ ಪೊಲೀಸರನ್ನು ಸಾಧ್ವಿ ಪ್ರಾಚಿ ಪ್ರಶಂಸಿಸಿದರು. ಉನ್ನಾವೋ ಸಂತ್ರಸ್ತೆಯ ಸಾವಿಗೆ ಕಾರಣವಾದವರ ಮೇಲೆ ಕೂಡ ಇದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Comments are closed.