ಜಕಾರ್ತಾ: ಯುವಕನೊಬ್ಬ ಮದುವೆಗೂ ಮುನ್ನವೇ ಲೈಂಗಿಕ ಸಂಬಂಧ ಹೊಂದಿದ್ದರಿಂದ ಆತನಿಗೆ 100 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ. ಈ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದರೂ ಬಿಡದೇ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಇಂಡೋನೇಷ್ಯಾದ ಯುವಕನೊಬ್ಬ ಮದುವೆಗೂ ಮುನ್ನವೇ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದನು. ಹೀಗಾಗಿ ಆತ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಆದ್ದರಿಂದ ಯುವಕನಿಗೆ ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ.
ಈ ರೀತಿ ಸಾರ್ವಜನಿಕವಾಗಿ ಒಬ್ಬರಿಗೆ ಛಡಿಯೇಟು ನೀಡುವುದನ್ನು ವಿಶ್ವದಾದ್ಯಂತ ಖಂಡನೆ ಮಾಡಲಾಗಿದೆ. ಆದರೂ ಇಂಡೋನೇಷ್ಯಾದ ಆಚೆ ಎನ್ನುವ ಪ್ರದೇಶದಲ್ಲಿ ಸ್ಥಳೀಯ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಸಾರ್ವಜನಿಕವಾಗಿ ಹೊಡೆಯುವುದು ಸಾಮಾನ್ಯವಾಗಿದೆ. ಇಲ್ಲಿ ಜೂಜು, ಮದ್ಯಪಾನ ಮತ್ತು ಸಲಿಂಗಕಾಮಿ, ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ವಿಶ್ವದ ಅತಿದೊಡ್ಡ ಮುಸ್ಲಿಂ ಬಹುಸಂಖ್ಯಾತ ದೇಶವಾದ ಇಂಡೋನೇಷ್ಯಾದ ಪ್ರದೇಶ ಆಚೆಯಲ್ಲಿ ಈ ಕಾನೂನು ಜಾರಿಯಲ್ಲಿದೆ. ಅದರಂತೆಯೇ ಇತ್ತೀಚೆಗೆ 22 ವರ್ಷದ ಯುವಕನಿಗೆ 100 ಛಡಿಯೇಟಿನ ಶಿಕ್ಷೆ ವಿಧಿಸಲಾಗಿದೆ.
ಯುವಕ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೊಡೆಯುತ್ತಿದ್ದ ಅಧಿಕಾರಿ ಬಳಿ, ನನ್ನ ಬೆನ್ನಿಗೆ ಹೊಡೆಯಬೇಡಿ ಎಂದು ಪರಿ ಪರಿಯಾಗಿ ಮನವಿ ಮಾಡಿಕೊಂಡನು. ಆದರೂ ಹೊಡೆಯುವುದನ್ನು ನಿಲ್ಲಿಸಲಿಲ್ಲ. ಹೊಡೆತಕ್ಕೆ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಮತ್ತೆ ಛಡಿಯೇಟು ನೀಡುವುದನ್ನು ಮುಂದುವರಿಸಿದ್ದಾರೆ. ಕೊನೆಗೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕನಿಗೆ ನೀಡುತ್ತಿದ್ದ ಶಿಕ್ಷೆಯನ್ನು ನೋಡಲು ನೂರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಅವರಲ್ಲಿ ಕೆಲವರು ‘ಕಠಿಣ, ಕಠಿಣ’ ಎಂದು ಕೂಗುತ್ತಿದ್ದರು. ಇಲ್ಲೂ ಕೆಲವರು “ಕಾನೂನು ಉಲ್ಲಂಘಿಸಿದ್ದಕ್ಕಾಗಿ ಆತ ಎದುರಿಸಬೇಕಾದ ಪರಿಣಾಮ ಇದು” ಎಂದು ಹೇಳುತ್ತಿದ್ದರು. ಈ ಹಿಂದೆ ಜುಲೈನಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಮೂರು ಜನರಿಗೆ ತಲಾ 100 ಬಾರಿ ಹೊಡೆಯಲಾಗಿತ್ತು.
Comments are closed.