ರಾಯಪುರ: ಪರೀಕ್ಷೆಯಲ್ಲಿ ಸಹಾಯ ಮಾಡಬೇಕಿದ್ದರೆ ನನ್ನ ಜೊತೆ ಲೈಂಗಿಕವಾಗಿ ಸಹಕರಿಸಿ, ಚಿಕನ್ ಊಟ ತಂದು ಕೊಡಬೇಕು ಎಂಬ ವಿಚಿತ್ರ ಬೇಡಿಕೆಯನ್ನು ಶಿಕ್ಷಕನೊಬ್ಬ ಇಟ್ಟಿದ್ದಾನೆ.
ಛತ್ತಿಸ್‍ಗಢದ ಜಶ್‍ಪುರದಲ್ಲಿ ಘಟನೆ ನಡೆದಿದೆ. 12ನೇ ತರಗತಿ ವಿದ್ಯಾರ್ಥಿನಿಯರು ಈ ಕುರಿತು ಆರೋಪಿಸಿದ್ದಾರೆ. ಶಿಕ್ಷಕ ರಾಜೇಶ್ ಕುಮಾರ್ ಭಾರದ್ವಾಜ್ ಈ ವಿಚಿತ್ರ ಬೇಡಿಕೆ ಇಟ್ಟಿದ್ದು, ಈಡೇರಿಸದಿದ್ದಲ್ಲಿ ಪರೀಕ್ಷೆಯಲ್ಲಿ ನಿಮ್ಮನ್ನು ಅನುತ್ತೀರ್ಣಗೊಳಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.
ಲೈಂಗಿಕ ಸಂಬಂಧ ಬೆಳೆಸಲು ಶಿಕ್ಷಕ ಪೀಡಿಸುತ್ತಿದ್ದ. ಇದೆಲ್ಲ ಬೇಡಿಕೆಗಳು ಮಾತ್ರವಲ್ಲದೆ ಚಿಕ್ಕನ್ ತಂದು ಕೊಡುವಂತೆ ಕೇಳಿಕೊಳ್ಳುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಅವನಿಗೆ ನಾನು ಚಿಕ್ಕನ್ ತಂದು ಕೊಡಬೇಕಂತೆ. ಇಲ್ಲವಾದಲ್ಲಿ ಪರೀಕ್ಷೆಯಲ್ಲಿ ಫೇಲ್ ಮಾಡುತ್ತೇನೆ ಎಂದು ಹೆದರಿಸಿದ್ದ. ಶಾಲೆಯಲ್ಲಿ ಕಿರುಕುಳ ನೀಡಿದ್ದು ಮಾತ್ರವಲ್ಲದೆ ಮೊಬೈಲಿನಲ್ಲಿ ಸಂದೇಶ ಸಹ ಕಳುಹಿಸಲು ಪ್ರಾರಂಭಿಸಿದ್ದ. ಪದೇ ಪದೆ ಸಂದೇಶ ಕಳುಹಿಸಿ, ಯಾಕೆ ನನ್ನೊಂದಿಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದ ಎಂದು ಇನ್ನೊಬ್ಬ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಈ ರೀತಿಯ ಬೇಡಿಕೆಗಳನ್ನು ಈಡೇರಿಸಿದರೆ ಇತಿಹಾಸ ಪರೀಕ್ಷೆಯಲ್ಲಿ ಕಾಪಿ ಮಾಡಲು ಪ್ರೋತ್ಸಾಹ ನೀಡುವುದಾಗಿ ಶಿಕ್ಷಕ ತಿಳಿಸಿದ್ದ ಎಂದು ವಿದ್ಯಾರ್ಥಿನಿಯರ ಗುಂಪೊಂದು ತಿಳಿಸಿದೆ.
ಈ ಕುರಿತು ಶಿಕ್ಷಕ ರಾಜೇಶ್ ಕುಮಾರ್ ಭಾರದ್ವಾಜ್ ಪ್ರತಿಕ್ರಿಯಿಸಿ, ನಾನು ಆ ರೀತಿಯಾಗಿ ಹೇಳಿಲ್ಲ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ನಾನು ಮನರಂಜನೆಗಾಗಿ ಬಳಸಿಕೊಳ್ಳುತ್ತೇನೆ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಶಿಕ್ಷಕ ಸ್ಪಷ್ಟಪಡಿಸಿದ್ದಾನೆ.
ಈ ಕುರಿತು ಜಿಲ್ಲಾ ಶಿಕ್ಷಣ ಅಧಿಕಾರಿ(ಡಿಇಓ) ಎನ್.ಕುಜುರ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ವಿಷಯ ತಿಳಿದ ನಂತರ ಎಚ್ಚೆತ್ತುಕೊಳ್ಳಲಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿವುದು. ಇದು ತುಂಬಾ ಗಂಭೀರ ಪ್ರಕರಣವಾಗಿದ್ದು, ಆರೋಪಿ ಶಿಕ್ಷಕನ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
Comments are closed.