ಕರಾವಳಿ

ಉಪ್ಪುಂದ ಶಿಕ್ಷಕಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸೆರೆ

Pinterest LinkedIn Tumblr

ಕುಂದಾಪುರ: ಇಲ್ಲಿನ ಉಪ್ಪುಂದ ಸರ್ಕಾರಿ ಉರ್ದು ಶಾಲೆ ಶಿಕ್ಷಕಿಯ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಯನ್ನು ಕೊನೆಗೂ ಬೈಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪ್ಪುಂದ ನಿವಾಸಿ, ಪ್ರಸ್ತುತ ಉಪ್ಪುಂದ ಸರ್ಕಾರಿ ಉರ್ದು ಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಮೋಹನ್ ಚಂದ್ರ (41) ಬಂಧಿತ ಆರೋಪಿ. ಆರೋಪಿಗೆ ತಲೆಮರೆಸಿಕೊಳ್ಳಲು ಸಹಾಯ ನೀಡಿದ ಆರೋಪದ ಮೇಲೆ ಗಂಗಾಧರ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ವಿವರ:
ಇಲ್ಲಿನ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಅವರಿಗೆ ಆರೋಪಿ ಮೋಹನ್ ಚಂದ್ರ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಮಾಡಿರುರುವುದಲ್ಲದೇ ಲೈಂಗಿಕ ದೌರ್ಜನ್ಯವೆಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಬೈಂದೂರು ಠಾಣೆಯಲ್ಲಿ ಡಿಸೆಂಬರ್ 11ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಮೋಹನ್ ಚಂದ್ರ ವಿರುದ್ದ ಈ ಹಿಂದೆಯೂ ಅದೇ ಶಾಲೆಯ ಮಮತಾ ಎನ್ನುವ ಶಿಕ್ಷಕಿಗೂ ಕಿರುಕುಳ ನೀಡಿದ ಆರೋಪವಿದ್ದು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದನು. ಈತನ ಗೂಂಡಾ ವರ್ತನೆಯಿಂದಾಗಿ ಆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಎಲ್ಲಾ ಶಿಕ್ಷಕರು ಹಿಂದೇಟು ಹಾಕುತ್ತಿದ್ದು, ಶಿಕ್ಷಕರೊಂದಿಗೆ ದುರ್ವರ್ತನೆ ತೋರುತ್ತಿದ್ದ ಮೋಹನ್ ಚಂದ್ರ ಅವರನ್ನು ಕೂಡಲೇ ಬಂದಿಸಬೇಕೆಂದು ಒತ್ತಾಯಿಸಿ ಡಿಸೆಂಬರ್ 14 ರಂದು ಶಿಕ್ಷಕರ ಸಂಘದ ವತಿಯಿಂದ ಶೀಘ್ರವೇ ಆರೋಪಿಯನ್ನು ಬಂಧಿಸಿ ಆತನಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ತಹಸೀಲ್ದಾರ್ ಹಾಗೂ ಸಿಪಿಐ ಕಚೇರಿ ಎದುರು ಪ್ರತಿಭಟನೆ ನಡೆದಿತ್ತು.

ಪ್ರಕರಣ ದಾಖಲಾದ ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮೋಹನ್‌ಚಂದ್ರನನ್ನು ಇದೀಗ ವಾರಗಳ ನಂತರ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈರ್ವರು ಆರೋಪಿಗಳನ್ನು ಹದಿನೈದು ದಿನಗಳ ಕಾಲ‌ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಾರಗಳಲ್ಲೇ ಬಂಧಿಸಿದ ಎಎಸ್ಪಿ ತಂಡ….
ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಸಿಪಿಐ ಸುರೇಶ್ ನಾಯ್ಕ್, ಪ್ರೊಬೇಶನರಿ ಪಿಎಸ್ಐ ಭೀಮಾಶಂಕರ್, ಕುಂದಾಪುರ ಎಎಸ್ಪಿ ತಂಡದ ಸಿಬ್ಬಂದಿಗಳಾದ ಸಂತೋಷ್, ಮಂಜುನಾಥ, ಸತೀಶ್ ಮತ್ತಿತರರು ಕುಮಟ, ಬೈಂದೂರು, ಸುರತ್ಕಲ್, ಕಾಸರಗೋಡು ಮೊದಲಾದೆಡೆ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಮರವಂತೆ ಸಮೀಪ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.