ಕರಾವಳಿ

ಮಂಗಳೂರಿನ ಬಂದರು ಠಾಣೆಗೆ ಬೆಂಕಿ ಹಚ್ಚಲು ಬಂದ ಉದ್ರಿಕ್ತರ ಮೇಲೆ ಗುಂಡಿನ ದಾಳಿ : ಇಬ್ಬರು!..

Pinterest LinkedIn Tumblr

ಮಂಗಳೂರು, ಡಿಸೆಂಬರ್. 19 : ಪೌರತ್ವ ಕಾಯ್ದೆ ವಿರೋಧಿಸಿ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭ ಬಂದರು ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಉದ್ರಿಕ್ತರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು,ಈ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ ಇನ್ನೊಂದು ಮೂಲದ ಪ್ರಕಾರ ಮಂಗಳೂರಿನ ಬಂದರು ಠಾಣೆಗೆ ಬೆಂಕಿ ಹಚ್ಚಲು ಬಂದ ಉದ್ರಿಕ್ತರ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ಸಂದರ್ಭ ಈ ಇಬ್ಬರಿಗೆ ಗುಂಡು ತಗುಲಿದೆ. ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರು ಹೇಳುವ ಪ್ರಕಾರ, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಗರದ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಾಜ್ಞೆ ಉಲ್ಲಂಘಿಸಿ ಜಮಾಯಿಸಿದ ಗುಂಪೊಂದರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಹಲವರನ್ನು ವಶಕ್ಕೆ ಪಡೆದ ಬಳಿಕ ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಏಳು ಸಾವಿರಕ್ಕೂ ಅಧಿಕ ಉದ್ರಿಕ್ತರ ಗುಂಪು ಠಾಣೆಯ ಮೇಲೆ ದಾಳಿ ನಡೆಸಿದೆ.

ಠಾಣೆಯನ್ನು ಸುತ್ತುವರಿದ ಗುಂಪು ಠಾಣೆಯೊಳಗಿದ್ದ ಸಿಬ್ಬಂದಿಗಳಿಗೆ ಠಾಣೆಯಿಂದ ಹೊರ ಬರಲು ಅವಕಾಶ ನೀಡದೆ ಹಲ್ಲೆ ನಡೆಸಲು ಹಾಗೂ ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದೆ. ಉದ್ರಿಕ್ತ ಗುಂಪು ದಾಳಿಗೆ ಮುಂದಾದಾಗ ಯಾವುದೇ ಆಯ್ಕೆ ಇಲ್ಲದೇ ನಾವು ಬಲಪ್ರಯೋಗ ಮಾಡಿದ್ದೇವೆ. ಪೊಲೀಸ್ ಠಾಣೆಗೆ ದಾಳಿ ಹಾಗೂ ಪೊಲೀಸರ ಹತ್ಯಾ ಯತ್ನ ನಡೆಸಿದ ಹಿನ್ನೆಲೆಯಲ್ಲಿ ನಾವು ಪ್ರತಿರೋಧ ತೋರಿದ್ದೇವೆ.

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾರಣ ಅನಿವಾರ್ಯವಾಗಿ ಅಧಿಕಾರಿಗಳು ಬಲಪ್ರಯೋಗ ಮಾಡಿದ್ದಾರೆ. ಘಟನೆಯಿಂದ ಹಲವಾರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಷ್ಟಕ್ಕೂ ಸುಮ್ಮನಾಗದ ಉದ್ರಿಕ್ತರು ಮತ್ತೆ ಮುನ್ನುಗ್ಗಿ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಇದರಲ್ಲಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಶಾಂತಿ ಸುವ್ಯವಸ್ತೆಯನ್ನು ಜನತೆ ಕಾಪಾಡಬೇಕು. ಯಾವುದೇ ಕಾರಣಕ್ಕೂ ನಗರದ ಜನ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಪೊಲೀಸ್ ಆಯುಕ್ತ ಡಾ. ಹರ್ಷಾ ಅವರು ಇದೇ ವೇಳೆ ಮಹಾ ನಗರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ಪರಿಸ್ಥಿತಿ ಕೈ ಮೀರಿದೆ. ಈ ಹಿನ್ನೆಲೆಯಲ್ಲಿ ಜನತೆ ಯಾವುದೇ ಕಾರಣಕ್ಕೂ ಬೀದಿಗೆ ಇಳಿದು ಅಹಿತಕರ ಘಟನೆ ನಡೆಸಬಾರದು. ಕಾನೂನು ಮೀರಿ ಜನ ವರ್ತಿಸಿದ್ದಲ್ಲಿ ನಾವು ಸುಮ್ಮನಿರುವುದಿಲ್ಲ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಮಹಾ ನಗರದಲ್ಲಿ ನಡೆದ ಘಟನೆಗಳ ಬಗ್ಗೆ ಅನಾವಶ್ಯಕ ಸಂದೇಶಗಳನ್ನು ರವಾನೆ ಮಾಡಿ ಜನತೆಯಲ್ಲಿ ಕೋಮು ದ್ವೇಷಕ್ಕೆ ಕಾರಣರಾದಲ್ಲಿ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಈಗಾಗಲೇ ನಗರದಲ್ಲಿ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಪೊಲೀಸರ ಮೇಲೆ ಕೂಡ ಹಲ್ಲೆ, ಕಲ್ಲು ತೂರಾಟ ನಡೆಸಲಾಗಿದೆ. ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಯಾರೂ ಕೂಡ ಅವಕಾಶ ನೀಡಬೇಡಿ ಎಂಬುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments are closed.