ಮಂಗಳೂರು, ಡಿಸೆಂಬರ್. 20 : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಡಿಸೆಂಬರ್ 22ರವರೆಗೆ ಕರ್ಫ್ಯೂ ವಿಧಿಸಿದ ಕಾರಣ ನಾಳೆ ಶನಿವಾರ ದ.ಕ. ಜಿಲ್ಲಾದ್ಯಂತ ಎಲ್ಲಾ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಿಂಸಾಚಾರದ ಪ್ರತಿಭಟನೆಯ ಬಳಿಕ ಬೂದಿಮುಚ್ಚಿದ ಕೆಂಡದಂತಾದ ಕಡಲನಗರಿಯಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು ಈ ಹಿನ್ನೆಲೆಯಲ್ಲಿ ಡಿ.21ರ ಶನಿವಾರದಂದು ದ.ಕ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.
ಐಟಿಐ, ಪಾಲಿಟೆಕ್ನಿಕ್, ವೃತ್ತಿಪರ ಕಾಲೇಜುಗಳಿಗೂ ರಜೆ ಸಾರಲಾಗಿದೆ. ಇದೇ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮದ್ಯದಂಗಡಿ, ವೈನ್ ಶಾಪ್, ಬಾರ್, ರೆಸ್ಟೋರೆಂಟ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಪ್ರತಿಭಟನೆಗೆ ಸಾಕ್ಷಿಯಾದ ಮಂಗಳೂರು ಶುಕ್ರವಾರ ಬೆಳಿಗ್ಗೆ ಶಾಂತಿಯಿಂದಿದೆ. ಕರ್ಫ್ಯೂ ಜಾರಿಯಲ್ಲಿರುವ ಕಮಿಷನರೇಟ್ ವಲಯದಲ್ಲಿ ಜನ ಸಂಚಾರ, ವಾಹನ ಸಂಚಾರ ವಿರಳವಾಗಿದೆ.ನಗರದಲ್ಲಿ ಪೊಲೀಸ್ ಭದ್ರತೆ ಮುಂದುವರಿದಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ವ್ಯವಸ್ಥೆ ಮಾಡಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟು, ಹೊಟೇಲ್ ಗಳ ಬಾಗಿಲು ಮುಚ್ಚಿವೆ. ತುರ್ತು ಸೇವೆಗಳಾದ ಮೆಡಿಕಲ್, ಹಾಲು ಮುಂತಾದವುಗಳಿಗೆ ಅನುವು ಮಾಡಿಕೊಡಲಾಗಿದೆ.
Comments are closed.