ರಾಷ್ಟ್ರೀಯ

ರಾಮಲೀಲಾದಲ್ಲಿ ಮೋದಿಯೇ ಟಾರ್ಗೆಟ್: ಗುಪ್ತಚರ ಇಲಾಖೆ

Pinterest LinkedIn Tumblr


ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಡಿ.22ರಂದು ಬಿಜೆಪಿ ಬೃಹತ್‌ ರ‍್ಯಾಲಿ ಆಯೋಜಿಸಿದೆ. ಈ ವೇಳೆ ಪಾಕ್‌ ಮೂಲದ ಭಯೋತ್ಪಾದಕರ ಗುಂಪು ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಪ್ರಧಾನಿ ವಿಶೇಷ ಭದ್ರತಾ ಪಡೆ ಹಾಗೂ ದಿಲ್ಲಿ ಪೊಲೀಸ್‌ಗೆ ಸೂಚನೆ ನೀಡಿದೆ.

ಬೃಹತ್‌ ಸಭೆಯ ವೇಳೆ ಅಗತ್ಯವಾದ ಭದ್ರತಾ ಕ್ರಮ, ಅಪಾರ ಜನಸ್ತೋಮದ ನಿರ್ವಹಣೆ, ಪ್ರಧಾನಿ ಮೋದಿ ಆಗಮಿಸುವ ರಸ್ತೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಸಮಾವೇಶದ ವೇಳೆ ದಾಳಿ ನಡೆಸುವ ಮಾಹಿತಿಯನ್ನು ಕಡೆಗಣಿಸುವಂತಿಲ್ಲ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಅಕ್ರಮ ಕಾಲೋನಿಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಮೋದಿ ರ‍್ಯಾಲಿಯನ್ನು ಬಿಜೆಪಿ ಆಯೋಜಿಸಿದೆ. ಗುಪ್ತಚರ ಇಲಾಖೆ ಎಚ್ಚರಿಕೆಯ ಹಿನ್ನೆಲೆಯಲ್ಲಿ ಹೈ ಎಲರ್ಟ್‌ ಘೋಷಣೆ ಮಾಡಲಾಗಿದ್ದು, ಗರಿಷ್ಠ ಭದ್ರತೆಗೆ ಸೂಚನೆ ನೀಡಲಾಗಿದೆ.

ಜೈಷ್‌-ಇ-ಮೊಹಮ್ಮದ್‌ ಸಂಘಟನೆಯ ಭಯೋತ್ಪಾದಕರ ತಂಡ ಸಿದ್ಧತೆ ನಡೆಸಿದೆ. ರಾಮ್‌ಲೀಲಾ ಮೈದಾನದಲ್ಲಿ ನಡೆಯಲಿರುವ ಮೆಗಾ ರ‍್ಯಾಲಿಯಲ್ಲಿ ಬೃಹತ್‌ ಪ್ರಮಾಣದ ಜನ ಸೇರಲಿದ್ದಾರೆ. ಈ ವೇಳೆ ಮೋದಿ ಗುರಿಯಾಗಿಸಿ ದಾಳಿ ನಡೆಸಲು ಸಂಚು ನಡೆಸಲಾಗಿದೆ. ದಿಲ್ಲಿ ಪೊಲೀಸ್‌ ಹಾಗೂ ಪ್ರಧಾನಿ ವಿಶೇಷ ಭದ್ರತಾ ಪಡೆ ರಾಮ್‌ಲೀಲಾ ಮೈದಾನದ ಭದ್ರತೆಯ ಜವಾಬ್ದಾರಿ ಹೊತ್ತಿದೆ. ರ‍್ಯಾಲಿಯಲ್ಲಿ ಎನ್‌ಡಿಯ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಸಂಪುಟದ ಸಚಿವರು ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಇತ್ತೀಚೆಗೆ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿತ್ತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ, ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಹಾಗೂ ವರ್ಷದ ಆರಂಭದಲ್ಲೇ ಏರ್‌ಸ್ಟ್ರೈಕ್‌ ಸೇರಿದಂತೆ ಇನ್ನಿತರವು ಮೋದಿ ಗುರಿಯಾಗಿಸಲು ಕಾರಣ ಎಂದು ಅಂದಾಜಿಸಲಾಗಿದೆ.

ಪಾಕಿಸ್ತಾನ ಇಂಟರ್‌-ಸರ್ವಿಸ್‌ ಇಂಟಲಿಜೆನ್ಸ್‌(ಐಎಸ್‌ಐ) ಭಯೋತ್ಪಾದನಾ ಸಂಘಟನೆಗಳಿಗೆ ಅಗತ್ಯವಾದ ಮೂಲ ಸೌಕರ್ಯ, ಆರ್ಥಿಕ ಸಹಾಯ ಮುಂದುವರೆಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಅಕ್ಟೋಬರ್‌ನಲ್ಲಿ ಲಷ್ಕರ್‌-ಎ-ತೊಯ್ಬಾ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಐಎ)ಗೆ ಪತ್ರದ ಮೂಲಕ ಭಾರತದಲ್ಲಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಗಣ್ಯರನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿ ಬೆದರಿಕೆ ಬಂದಿತ್ತು. ಇದೇ ರೀತಿ ಸೆಪ್ಟೆಂಬರ್‌ನಲ್ಲಿಯೂ ಜೈಷ್‌-ಎ-ಮೊಹಮ್ಮದ್‌ನ ಶಾಂಶೆ ವಾಣಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಮೋದಿಯನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಿದ್ದವು. ಜುಲೈ ಆರಂಭದಲ್ಲಿ ಅಲ್‌ಖೈದಾ ಸಂಘಟನೆಗೆ ಹೊಂದಿಕೊಳ್ಳುವ ಅನ್ಸರ್‌ ಘಾಸ್ವಾತ್‌ ಉಲ್‌ ಹಿಂದ್‌ ಸಂಘಟನೆ ಮೋದಿ ಪೋಸ್ಟರ್‌ ಅಂಟಿಸುವ ಮೂಲಕ ಬೆದರಿಕೆಯೊಡ್ಡಿದ್ದವು.

Comments are closed.