ರಾಷ್ಟ್ರೀಯ

ಪೌರತ್ವ ಕಾಯ್ದೆ ವಿರುದ್ಧ ನಮ್ಮ ಪಕ್ಷ​ ಹೋರಾಟ ಮಾಡಲಿದೆ; ಸೋನಿಯಾ

Pinterest LinkedIn Tumblr


ನವದೆಹಲಿ(ಡಿ.20): ದೇಶದುದ್ದಕ್ಕೂ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ದುರದೃಷ್ಟಕರ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬೇಸರ ವ್ಯಕ್ತಪಡಿಸಿದ್ಧಾರೆ. ಭಾರತೀಯ ಜನತಾ ಪಕ್ಷದ ದಮನಕಾರಿ ಧೋರಣೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ದೇಶದುದ್ದಕ್ಕೂ ಜನರು, ವಿದ್ಯಾರ್ಥಿಗಳ ಹಕ್ಕು ಕಸಿಸುಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್​ ಇದರ ವಿರುದ್ಧ ಹೋರಾಟ ಮಾಡಲಿದೆ ಎಂದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕಾಂಗ್ರೆಸ್​​ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಜನವಿರೋಧಿ ನೀತಿಗಳ ವಿರುದ್ಧ ವಿವಿಗಳಲ್ಲಿ ಹೋರಾಟ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ತಪ್ಪು ನೀತಿ ಪ್ರಶ್ನಿಸುವ ಹಕ್ಕಿದೆ. ಜನರ ಭಾವನೆ, ಸಲಹೆಗಳನ್ನು ಕೇಳುವುದು ಸರ್ಕಾರದ ಕರ್ತವ್ಯ. ಜನರ ಧ್ವನಿಗಳನ್ನು ಹತ್ತಿಕ್ಕುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ, ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತೆ ಎಂದು ಕಿಡಿಕಾರಿದ್ದಾರೆ.

ಇನ್ನು ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯಿಂದ ಜನರಿಗೆ ಧಕ್ಕೆ ಆಗಲಿದೆ. ಈ ದಮನಕಾರಿ ಧೋರಣೆ ಬಿಟ್ಟು ಕೇಂದ್ರ ಸರ್ಕಾರ ಜನರ ಸಲಹೆ ಕೇಳಬೇಕು. ಸಂವಿಧಾನದ ಮೂಲ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ದೇಶದ ಜನರೊಂದಿಗೆ ಸದಾಕಾಲ ಕಾಂಗ್ರೆಸ್​ ಇರಲಿದೆ ಎಂದು ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕ ಬಳಿಕ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ಅಸಂವಿಧಾನಿಕವಾಗಿದೆ ಎಂಬ ಎಂಬ ಆರೋಪ ಕೇಳಿ ಬರುತ್ತಿದೆ. ಎನ್​ಆರ್​ಸಿ ಮೂಲಕ ನಿರ್ದಿಷ್ಟ ಸಮುದಾಯದವರನ್ನು ಟಾರ್ಗೆಟ್ ಮಾಡಬಹುದು ಎಂಬಿತ್ಯಾದಿ ಮಾತುಗಳು ಚಾಲನೆಯಲ್ಲಿವೆ. ಇದರಿಂದಾಗಿ ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆದಿವೆ. ಅನಗತ್ಯ ಗೊಂದಲಗಳು ಸೃಷ್ಟಿಯಾಗಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ಭಾರತದ ರಾಜಧಾನಿ ದೆಹಲಿ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಕರ್ನಾಟಕದಲ್ಲೂ ಎನ್​​ಆರ್​​ಸಿ ವಿರುದ್ಧ ಹೋರಾಟದ ಕಿಚ್ಚು ಹಬ್ಬಿದೆ. ನಿನ್ನೆ ಎಡಪಕ್ಷಗಳು ನೀಡಿದ ರಾಷ್ಟ್ರವ್ಯಾಪಿ ಬಂದ್ ಕರೆಗೆ ಕಾಂಗ್ರೆಸ್​ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿದ್ದವು. ಇನ್ನೂ ಮೂರು ದಿನಗಳ ಕಾಲ ಕರ್ನಾಟಕದಲ್ಲಿ 144 ಸೆಕ್ಷನ್​​​ ನಿಷೇದಾಜ್ಞೆ ಮುಂದುವರೆಯಲಿದೆ. ಈಗಾಗಲೇ ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನಿಷೇಧಾಜ್ಞೆ ಲೆಕ್ಕಿಸದೆ ರಾಜ್ಯಾದ್ಯಂತ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿವೆ. ಮಂಗಳೂರಿನಲ್ಲಂತೂ ಪ್ರತಿಭಟನೆ ವೇಳೆ ಇಬ್ಬರು ಅಮಾಯಕರು ಸಾವನ್ನಪ್ಪಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಂದು ಕೂಡ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ಮುಂದುವರಿದಿದೆ. ಈಗಾಗಲೇ ದಕ್ಷಿಣ ಕನ್ನಡ ಭಾಗದಲ್ಲಿ 48 ಗಂಟೆಗಳ ಕಾಲ ಇಂಟರ್​ನೆಟ್​​ ಸ್ಥಗಿತಗೊಳಿಸಿ ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್​​ ಗೋಯಲ್​​ ಆದೇಶಿಸಿದ್ಧಾರೆ.​

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗುವ ಕಾಲ ಸನ್ನಿಹಿತವಿದೆ. ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಸಿಗುತ್ತಿದ್ದಂತೆಯೇ ದೇಶದ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಮೊದಲಿಟ್ಟವು. ನಂತರ ಇದು ರಾಜಧಾನಿ ದೆಹಲಿಯಲ್ಲಿ ಮಾರ್ದನಿಸಿತು. ದೇಶದ ವಿವಿಧೆಡೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.ನಿಷೇಧಾಜ್ಞೆ ಇನ್ನೆರಡು ದಿನ ಮುಂದುವರೆಯುವ ಕಾರಣ ಕಾಂಗ್ರೆಸ್​​ ಮತ್ತು ಜೆಡಿಎಸ್​​ ಸೇರಿದಂತೆ ಪ್ರಗತಿಪರರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೀದಿಗಿಳಿದ ಪ್ರತಿಭಟನಕಾರರ ಬಂಧಿಸುವ ಮೂಲಕ ಜನರ ಹಕ್ಕುಗಳನ್ನು ಬಿಜೆಪಿ ಸರ್ಕಾರ ಹತ್ತಿಕುತ್ತಿದೆ ಎಂದು ಎರಡು ಪಕ್ಷಗಳು ಆರೋಪಿಸಿವೆ.

Comments are closed.