ಕರಾವಳಿ

ಮಂಗಳೂರು ಶಾಂತ – ಪರಿಸ್ಥಿತಿಯನ್ನು ಗಮನಿಸಿ ಕರ್ಫ್ಯೂ ಸಡಿಲಿಕೆ ಬಗ್ಗೆ ಚಿಂತನೆ : ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಸಹಜ ಸ್ಥಿತಿಗೆ ಮರಳಿದೆ. ನಗರದಲ್ಲಿ ಶುಕ್ರವಾರದಂದು ಯಾವುದೇ ಗಲಭೆಗಳು ನಡೆದಿಲ್ಲ. ಪರಿಸ್ಥಿತಿಯನ್ನು ಗಮನಿಸಿ ಕರ್ಫ್ಯೂ ಸಡಿಲಿಕೆಯ ಬಗ್ಗೆ ಚಿಂತನೆ ಮಾಡಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿ.22ರಂದು ರಾತ್ರಿ 12ಗಂಟೆಯವರೆಗೆ ವಿಧಿಸಲಾಗಿರುವ ಕರ್ಫ್ಯೂ ಸಡಿಲಿಕೆ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದರೆ ಮಂಗಳೂರು ನಗರದಲ್ಲಿ ಕರ್ಫ್ಯೂ ಅನ್ನು ನಾಳೆ ಮಧ್ಯಾಹ್ನ ಸ್ವಲ್ಪ ಹೊತ್ತು ಸಡಿಲಿಸುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಎಲ್ಲಾ ಧರ್ಮಗಳು ನಗರದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಗುರುವಾರದಂದು ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಎಡಿಜಿಪಿ ದಯಾನಂದ್ ಮಂಗಳೂರು ನಗರಕ್ಕೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಡಾ. ಪಿ.ಎಸ್.ಹರ್ಷ ತಿಳಿಸಿದರು.

ಕರ್ಫ್ಯೂ ನಾಳೆ ಮಧ್ಯಾಹ್ನದವರೆಗೆ ಮುಂದುವರಿಕೆ?.. 

ಗುರುವಾರ ಪೌರತ್ವ ಕಾಯ್ದೆ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದ್ರೂ ವಿವಿಧ ಸಂಘಟನೆಗಳು ಕೆರಳಿದ್ದವು. ಬಳಿಕ ಪರಿಸ್ಥಿತಿ ಹತೋಟಿಗೆ ಬಾರದ ಸಂದರ್ಭ ಲಾಠಿಚಾರ್ಜ್ ಮಾಡಿ ಪ್ರತಿಭಟನಾಕಾರರನ್ನ ಚದುರಿಸಿದ್ರು. ಇದಾದ್ರೂ ಬಗ್ಗದ ಪ್ರತಿಭಟನಾಕಾರರು ಮತ್ತೆ ಪೊಲೀಸರ ಮೇಲೆಯೆ ಕಲ್ಲೆಸೆದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಇದಾದ ಬಳಿಕ ಎರಡು ಯುವಕರು ಕೂಡ ಹಿಂಸಾಚಾರದಲ್ಲಿ ಮೃತರಾಗಿದ್ರು. ಬಳಿಕ ಮಂಗಳೂರು ನಗರದಾದ್ಯಂತ ಕರ್ಫ್ಯೂ ಹೇರಲಾಗಿತ್ತು. ಅಷ್ಟೇ ಅಲ್ಲ ಇಂಟರ್ನೆಟ್ ಸೇವೆ ಕೂಡ ಬಂದ್ ಮಾಡಲಾಗಿದೆ.

ಇದೀಗ ಪರಿಸ್ಥಿತಿಯನ್ನು‌ ಹತೋಟಿಗೆ ತರಲು ಇಡೀ ಜಿಲ್ಲೆಯಾದ್ಯಂತ ಪೊಲೀಸರ ಸರ್ಪಗಾವಲಿದ್ದರೂ, ಕರ್ಫ್ಯೂ ಸ್ಥಿತಿಯನ್ನ ನಾಳೆ ಮಧ್ಯಾಹ್ನದ ವರೆಗೆ ಮುಂದುವರಿಸಲಾಗಿದೆ. ಇನ್ನೊಂದೆಡೆ ಕರ್ಫ್ಯೂನಿಂದಾಗಿ ಜನಸಾಮಾನ್ಯರಿಗೆ ಭಾರೀ ಪೆಟ್ಟು ಬಿದ್ದಿದೆ. ಒಂದೆಡೆ ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾದ್ರೆ ಮತ್ತೊಂದೆಡೆ ತಿನ್ನಲು ಆಹಾರ ಸಾಮಾಗ್ರಿಯ ಕೊರತೆ ಉಂಟಾಗಿದೆ. ನಗರದಲ್ಲಿ ವಾಹನ ಸಂಚರಿಸಿದ್ರೆ ಪೊಲೀಸರೂ ಲಾಠಿ ಹಿಡಿದು ಮನೆಗೆ ತೆರಳುವಂತೆ ಸೂಚಿಸ್ತಿದ್ದಾರೆ. ಹಾಗಾಗಿ ಸದ್ಯ ಮಂಗಳೂರಿನಲ್ಲಿ ಪರಿಸ್ಥಿತಿ ಕೊಂಚ ಹತೋಟಿಗೆ ಬಂದಿದ್ರೂ, ನಾಳೆ ವರೆಗೆ ಕರ್ಫ್ಯೂ ಮುಂದುವರಿದೆ.

Comments are closed.