ದೆಹಲಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಂತಿಯುತ ಹೋರಾಟಕ್ಕೆ ಮುಂದಾಗಿದ್ದ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಅವರನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಯ ವಿರುದ್ಧ ಭೀಮ್ ಸೇನೆ ಶುಕ್ರವಾರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು. ಪ್ರತಿಭಟನಾ ಮೆರವಣಿಗೆ ವೇಳೆ ಚಂದ್ರಶೇಖರ್ ಆಜಾದ್ ಐತಿಹಾಸಿಕ ಜುಮಾ ಮಸೀದಿಯಲ್ಲಿ ಕುಳಿತು ಪ್ರತಿಭಟಿಸಲು ಮುಂದಾಗಿದ್ದರು.
ಆದರೆ, ಪೊಲೀಸರು ಮಸೀದಿಯ ಒಳಗೆ ಪ್ರವೇಶಕ್ಕೆ ಪ್ರತಿಭಟನಾಕಾರರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಪೊಲೀಸರ ತಡೆಯನ್ನೂ ಮೀರಿ ಭೀಮ್ ಸೇನೆಯ ಕಾರ್ಯಕರ್ತರು ನಿನ್ನೆ ಜಾಮಿಯಾ ಮಸೀದಿಯನ್ನು ಪ್ರವೇಶಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಪೊಲೀಸರು ಚಂದ್ರಶೇಖರ್ ಆಜಾದ್ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಎದುರು ಮಾತನಾಡಿರುವ ಚಂದ್ರಶೇಖರ್ ಆಜಾದ್, “ದೇಶದಲ್ಲಿ ಕಪ್ಪು ಕಾನೂನು ಆಡಳಿತದಲ್ಲಿದೆ. ಪೊಲೀಸರು ನಮ್ಮ ಮೇಲೆ ಸತತ ದಾಳಿ ನಡೆಸುತ್ತಿದ್ದಾರೆ. ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ. ಆರ್ಎಸ್ಎಸ್ ನಮ್ಮ ವಿರುದ್ಧ ಇಂತಹ ದಾಳಿಯನ್ನು ಸಂಘಟಿಸಿದೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ.
ಆದರೆ, ಶಾಂತಿಯುತವಾಗಿ ನಡೆಯುತ್ತಿದ್ದ ನಮ್ಮ ಹೋರಾಟದಲ್ಲಿ ಪೊಲೀಸರು ಕಾನೂನು ಬಾಹೀರವಾಗಿ ವರ್ತಿಸಿ ನಮ್ಮ ಹೋರಾಟಗಾರರನ್ನು ಬಂಧಿಸಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಮತ್ತು ಎನ್ಆರ್ಸಿ ಕಾಯ್ದೆಯನ್ನು ಹಿಂಪಡೆಯುವವರೆಗೆ ಭೀಮ್ ಆರ್ಮಿ ಹೋರಾಟ ಮುಂದುವರೆಯುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
Comments are closed.