ಬೆಂಗಳೂರು: ಬಿಗ್ ಬಾಸ್ ಸೀಸನ್- 5 ವಿಜೇತ, ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಗೌಡ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ಚಂದನ್ ಹಾಗೂ ನಿವೇದಿತಾ ಮುಂದಿನ ವರ್ಷ ಫೆಬ್ರವರಿ ತಿಂಗಳ ಕೊನೆ ವಾರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಈಗಿನಿಂದಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.
ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು.
ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ.
Comments are closed.