ಕರಾವಳಿ

ಗೋಲಿಬಾರ್‌ನಿಂದ ಮೃತಪಟ್ಟ ಕುಟುಂಬಸ್ಥರ ಜತೆ ಸಿಎಂ ಮಾತುಕತೆ : ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡಲು ಸೂಚನೆ

Pinterest LinkedIn Tumblr

ಮಂಗಳೂರು,ಡಿಸೆಂಬರ್.21 : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸ್ ಗೋಲಿಬಾರಿಗೆ ಸಂಬಂಧಿಸಿದಂತೆ ಇಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಇಂದು ಶನಿವಾರ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೋಲೀಬಾರ್ ನಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಶನಿವಾರ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಅವರು ವಿವಿಧ ಸಮುದಾಯದ ಮುಖಂಡರನ್ನು ಭೇಟಿಯಾಗಿ ಅಹವಾಲು ಆಲಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಗೋಲಿಬಾರ್ ನಿಂದ ಮೃತಪಟ್ಟ ಕುಟುಂಬಸ್ಥರ ಜತೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಅವರ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಸಾಂತ್ವಾನ ಹೇಳಿದ್ದೇನೆ. ಬೆಂಗಳೂರಿನಲ್ಲಿ ನಾನು ಮುಸ್ಲಿಂ ಮುಖಂಡರೊಂದಿಗೆ ಮಾತನಾಡಿ ಮನವರಿಕೆ ಮಾಡುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಜಿಲ್ಲೆಯ ಹಿಂದೂ ಮುಸ್ಲಿಂ, ಕ್ರೈಸ್ತ ಮುಖಂಡರು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ಪ್ಯೂ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿ ಭಾನುವಾರ ಹಗಲಿನಲ್ಲಿ ಕರ್ಪ್ಯೂ ಹಿಂದಕ್ಕೆ ಪಡೆದು, ಡಿ.22ರ ರಾತ್ರಿ ಮತ್ತೆ ಜಾರಿಗೊಳಿಸುವಂತೆ ಸೂಚಿಸಿದ್ದೇನೆ. ಡಿ.23 ರಿಂದ ಕ್ರಿಸ್ಮಸ್ ಸಮೇತ ಹಬ್ಬಹರಿದಿನಗಳನ್ನು ಆಚರಿಸಲು ಅನುಮಾಡಿಕೊಡುವ ನಿಟ್ಟಿನಲ್ಲಿ ಕರ್ಪ್ಯೂ ಸಂಪೂರ್ಣ ಹಿಂಪಡೆಯಲಾಗುವುದು. ಆದ್ರೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಹೇಳಿದರು.

ಇನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆ ಹಿಂಸಾತ್ಮಕ ಘಟನೆ ಹಾಗೂ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿರುವ ಘಟನೆ ಸಂಬಂಧಿಸಿ ಸಮಗ್ರವಾದ ವರದಿ ನೀಡಲು ಸೂಚಿಸಿದ್ದೇನೆ. ಮಂಗಳೂರಿನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ವಿವರ ಕೇಳಿದ್ದೇನೆ. ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.

ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಅಹಿತಕರ ಘಟನೆ ನಡೆದ ಬಗ್ಗೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದೇನೆ. ಘಟನೆಯ ಕುರಿತು ವರದಿ ತರಿಸಿಕೊಂಡು ಪರಿಶೀಲಿಸುತ್ತೇನೆ. ಜನರು ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ವೇಳೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ವೇದವ್ಯಾಸ ಕಾಮತ್,ಭರತ್ ಶೆಟ್ಟಿ, ಯು.ಟಿ. ಖಾದರ್, ಎಂ ಬಿ.ಎಂ. ಫಾರೂಕ್, ರಾಜೇಶ್ ನಾಯಕ್, ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ಮಠಂದೂರು, ಮಾಜಿ ಶಾಸಕರಾದ ಮೊಹಿದೀನ್ ಬಾವಾ, ಜೆ.ಆರ್. ಲೋಬೋ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಮತ್ತಿತರರು ಉಪಸ್ಥಿತರಿದ್ದರು.

Comments are closed.