ಮೆಲ್ಬರ್ನ್: ಭಾರತ-ಪಾಕಿಸ್ಥಾನ ನಡುವಿನ ಪ್ರಕ್ಷುಬ್ಧ ಸ್ಥಿತಿಯ ನಡುವೆಯೇ “ಅಭಿಮಾನದ ಸಂಬಂಧ’ವೊಂದಕ್ಕೆ ಕ್ರಿಕೆಟ್ ನಿದರ್ಶನವಾಗಿದೆ. ಪಾಕಿಸ್ಥಾನದ ಬೌಲರ್ ಓರ್ವ ಭಾರತದ ಭದ್ರತಾ ಸಿಬಂದಿಗೆ ಚೆಂಡನ್ನು ಉಡುಗೊರೆಯಾಗಿ ನೀಡುವ ಮೂಲಕ ಕ್ರೀಡಾಪ್ರಿಯರ ಹೃದಯ ಗೆದ್ದಿದ್ದಾರೆ.
ಇದಕ್ಕೆ ನಿದರ್ಶನವಾದದ್ದು ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ “ಬಿಗ್ ಬಾಶ್ ಲೀಗ್’ ಕ್ರಿಕೆಟ್ ಪಂದ್ಯಾವಳಿ. ಮೆಲ್ಬರ್ನ್ ಸ್ಟಾರ್ ತಂಡದ ಪಾಕಿಸ್ಥಾನಿ ಬೌಲರ್ ಹ್ಯಾರಿಸ್ ರವೂಫ್ ಹರಿಕೇನ್ಸ್ ತಂಡದ ವಿರುದ್ಧ 27 ರನ್ ವೆಚ್ಚದಲ್ಲಿ 5 ವಿಕೆಟ್ ಉಡಾಯಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ರವೂಫ್ ದಾಳಿಗೆ ತತ್ತರಿಸಿದ ಹರಿಕೇನ್ಸ್ 111ಕ್ಕೆ ಕುಸಿದು 52 ರನ್ನುಗಳ ಸೋಲಿಗೆ ತುತ್ತಾಗಿತ್ತು.ಪಂದ್ಯದ ಬಳಿಕ ಹ್ಯಾರಿಸ್ ರವೂಫ್ ತಮ್ಮ ಸಾಧನೆಗೆ ಕಾರಣವಾದ ಚೆಂಡನ್ನು ಭಾರತದ ಭದ್ರತಾ ಸಿಬಂದಿಗೆ ಉಡುಗೊರೆಯಾಗಿ ನೀಡಿದರು.
ಭಾವುಕ ಕ್ಷಣ…
“ನಾನು ಈ ಚೆಂಡನ್ನು ಭಾರತದ ಭದ್ರತಾ ಸಿಬಂದಿಗೆ ಉಡುಗೊರೆಯಾಗಿ ಕೊಟ್ಟಿದ್ದೇನೆ. ಮೈದಾನಕ್ಕೆ ಇಳಿಯುವಾಗ ಆತನಲ್ಲಿ, ನಾನು ಪಾಕಿಸ್ಥಾನಿ ಆಟಗಾರ ಎಂದು ಹೇಳಿದೆ. ಆತ ಭಾವುಕನಾಗಿ ನನ್ನನ್ನು ತಬ್ಬಿಕೊಂಡ…’ ಎಂಬುದಾಗಿ ಇದರ ಹಿನ್ನೆಲೆಯನ್ನು ರವೂಫ್ ವಿವರಿಸಿದರು.
ಪಾಕಿಸ್ಥಾನ್ ಸೂಪರ್ ಲೀಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಹ್ಯಾರಿಸ್ ರವೂಫ್ ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನಾಡಿಲ್ಲ.
Comments are closed.