ರಾಂಚಿ(ಡಿ. 23): ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯ ಸೋಲನುಭವಿಸಿದೆ. ಹೇಮಂತ್ ಸೋರೆನ್ ಮುಂದಾಳತ್ವದಲ್ಲಿ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟ ದಿಗ್ವಿಜಯ ಸಾಧಿಸಿದೆ. ಸಂಭಾವ್ಯ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಈ ಗೆಲುವು ಬಿಜೆಪಿಯ ವಿಭಜಕ ನೀತಿಗೆ ಸಿಕ್ಕ ಶಾಸ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಮಂದಿರ-ಮಸೀದಿ, ಎನ್ಆರ್ಸಿ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿಯು ಜಾರ್ಖಂಡ್ನಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸಿತು. ಆದರೆ, ಜನರು ಅಭಿವೃದ್ಧಿಗೆ ಮತ ಹಾಕಿದ್ಧಾರೆ. ಜಾರ್ಖಂಡ್ ತನ್ನ ಸಂದೇಶ ರವಾನಿಸಿದೆ. ಇದು ಜಾರ್ಖಂಡ್ ಜನತೆಗೆ ಸಿಕ್ಕ ಗೆಲುವಾಗಿದೆ ಎಂದು ಹೇಮಂತ್ ಸೊರೇನ್ ವಿಶ್ಲೇಷಿಸಿದ್ದಾರೆ.
ಇದೇ ವೇಳೆ, ನೋಟ್ ಬ್ಯಾನ್ ನಂತರ ಉದ್ಭವಿಸಿದ ಪರಿಸ್ಥಿತಿಗೆ ಎನ್ಆರ್ಸಿಯ ಯೋಜನೆಯನ್ನು ಹೋಲಿಕೆ ಮಾಡಿದ ಅವರು, ಭಾರತೀಯರು ತಮ್ಮ ಪೌರತ್ವ ಸಾಬೀತುಪಡಿಸಲು ಕ್ಯೂನಲ್ಲಿ ನಿಂತುಕೊಳ್ಳಬೇಕಾ ಎಂದು ಪ್ರಶ್ನಿಸಿದ್ಧಾರೆ.
“ಭಾರತದಲ್ಲಿ 18 ಕೋಟಿ ಜನರು ಕೂಲಿ ಕಾರ್ಮಿಕರು ಮತ್ತು ಭೂರಹಿತ ರೈತರಾಗಿದ್ದಾರೆ. ಇವರಲ್ಲಿ ಕಾನೂನಾತ್ಮಕ ದಾಖಲೆಗಳನ್ನು ನಿರೀಕ್ಷಿಸಲು ಹೇಗೆ ಸಾಧ್ಯ” ಎಂದು ಹೇಮಂತ್ ಸೋರೆನ್ ಕೇಳಿದ್ಧಾರೆ.
ಈ ಎನ್ಆರ್ಸಿ ಯೋಜನೆಯ ಬಗ್ಗೆ ಬಿಜೆಪಿ ಚುನಾವಣೆಯ ವೇಳೆ ಮಾತನಾಡಿದ್ದು ಜನರ ದಿಕ್ಕು ತಪ್ಪಿಸಲಷ್ಟೇ ಎಂದು ಸೊರೇನ್ ಆರೋಪಿಸಿದ್ದಾರೆ. “ಅಷ್ಟೊಂದು ಜನರು ಯಾಕೆ ಬೀದಿಗಿಳಿದಿದ್ದಾರೆ? ಬಡ ಜನರು ಹೊಟ್ಟೆಪಾಡಿಗೆ ಕೆಲಸ ಅರಸಬೇಕೋ ಅಥವಾ ದಾಖಲೆಗಳಿಗಾಗಿ ಅಲೆದಾಡಬೇಕೋ? ಬಿಜೆಪಿಯು ಜನತೆಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ತನ್ನ ಅವ್ಯವಸ್ಥಿತ ಕಾನೂನುಗಳನ್ನು ಜನರ ಮೇಲೆ ಬಲಪ್ರಯೋಗ ಮಾಡಿ ಹೇರಲು ಯತ್ನಿಸುತ್ತಿದೆ. ಬಿಜೆಪಿಗೆ ಒಳ್ಳೆಯ ಉದ್ದೇಶವಿದ್ದಿದ್ದರೆ ಭಾರತದ ಅನೇಕ ಕಡೆ ಅಂತರ್ಜಾಲವನ್ನು ಯಾಕೆ ನಿಲ್ಲಿಸಿದೆ?” ಎಂದೂ ಜೆಎಂಎಂ ಮುಖಂಡ ಪ್ರಶ್ನೆ ಹಾಕಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೇಮಂತ್ ಸೊರೇನ್ ನೇತೃತ್ವದ ಮೈತ್ರಿಕೂಟವು 47 ಸ್ಥಾನಗಳನ್ನು ಗೆದ್ದಿದೆ. ಬಹುಮತಕ್ಕೆ ಅಗತ್ಯವಿರುವುದು 41 ಆಗಿದೆ. ಈ ಹಿನ್ನೆಲೆಯಲ್ಲಿ ಸೋರೆನ್ ಅವರು ಮುಖ್ಯಮಂತ್ರಿ ಆಗುವುದು ನಿಶ್ಚಿತವಾಗಿದೆ. ಜೆಎಂಎಂ ಪಕ್ಷವೊಂದೇ 30 ಸ್ಥಾನಗಳನ್ನು ಗೆದ್ದಿದೆ. ಇದು ಆ ಪಕ್ಷದ ಇತಿಹಾಸದಲ್ಲೇ ಶ್ರೇಷ್ಠ ಸಾಧನೆ ಎನಿಸಿದೆ.
Comments are closed.