ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಭಾರತೀಯ ಜನತಾ ಪಕ್ಷವನ್ನು ದಿಗ್ಬ್ರಮೆಗೊಳಿಸಿದೆ. ೮೧ ಸ್ಥಾನಗಳ ಪೈಕಿ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಹಾಗೂ ಆರ್‌ಜೆಡಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಮೂರು ಪಕ್ಷಗಳ ಮೈತ್ರಿಕೂಟ ಮ್ಯಾಜಿಕ್ ಸಂಖ್ಯೆಯ ಗಡಿ ದಾಟಿದೆ.
ಆದರೆ, ಒಂದು ವರ್ಷದಲ್ಲಿ ಐದನೇ ರಾಜ್ಯವನ್ನು ಕಳೆದುಕೊಂಡು ಬಿಜೆಪಿ ನಾಯಕರು ಚಿಂತೆಗೀಡಾಗಿದ್ದಾರೆ. ಐದು ವರ್ಷಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರು, ಕೇವಲ ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ , ಅದರ ಮೈತ್ರಿಕೂಟಕ್ಕೆ ಐದು ರಾಜ್ಯಗಳನ್ನು ಸಮರ್ಪಿಸಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್ ಘಡ, ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದು ಕೊಂಡಿರುವ ಬಿಜೆಪಿ, ಈಗ ಜಾರ್ಖಂಡ್‌ನಲ್ಲಿ ಅಧಿಕಾರ ಕಳೆದುಕೊಂಡಿದೆ.
ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೂ ಪ್ರಮುಖ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವುದು ಹಿರಿಯ ಬಿಜೆಪಿ ನಾಯಕರನ್ನು ತೀವ್ರವಾಗಿ ಕಂಗೆಡಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಮತದಾನ ಶೇಕಡವಾರು ಹೆಚ್ಚಳದ ಹೊರತಾಗಿಯೂ ಮಧ್ಯಪ್ರದೇಶದಲ್ಲಿ ಬಿಜೆಪಿ ಅತಿ ಕಡಿಮೆ ಸ್ಥಾನಗಳೊಂದಿಗೆ ಅಧಿಕಾರ ಕಳೆದುಕೊಂಡಿದೆ. ಅತ್ತ ..ಚತ್ತೀಸ್ ಘಡ ಚುನಾವಣೆಯಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ರಾಜಸ್ಥಾನದಲ್ಲಿ, ವಸುಂಧರಾ ರಾಜೇ ಆಡಳಿತ ವಿರುದ್ದ ವ್ಯಕ್ತವಾದ ಜನಾಭಿಪ್ರಾಯ, ಕಾಂಗ್ರೆಸ್ ಗೆ ವರದಾನವಾಗಿ ಪರಿಣಮಿಸಿ, ಅಧಿಕಾರ ಲಭಿಸಿದೆ. ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ಗೆಲುವು ಸಾಧಿಸಿದ ನಂತರ, ಶಿವಸೇನೆ ನಿರ್ಗಮನದಿಂದ ಅಧಿಕಾರ ಎಂಬುದು ಎಟುಕಲಾರದ ದ್ರಾಕ್ಷಿಯಾಗಿ ಕೊನೆಗೆ, ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ಅಂತಿಮವಾಗಿ ಅಧಿಕಾರ ಪಡೆದುಕೊಳ್ಳುವಲ್ಲಿ ಸಫಲವಾಗಿವೆ.
ವರ್ಷದಲ್ಲಿ ಐದು ಪ್ರಮುಖ ರಾಜ್ಯಗಳು ತನ್ನ ತೆಕ್ಕೆಯಿಂದ ಕೈಜಾರಿದ ಕಾರಣ ಬಿಜೆಪಿ ನಾಯಕರಲ್ಲಿ ಗೊಂದಲ ಪ್ರಾರಂಭವಾಗಿದೆ. ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್, ವಸುಂಧರಾ ರಾಜೆ, ದೇವೇಂದ್ರ ಫಡ್ನವೀಸ್ ಮತ್ತು ರಘುಬರ್ ದಾಸ್ ಅವರಂತಹ ಪ್ರಬಲ ನಾಯಕರ ಸೋಲನ್ನು ಜೀರ್ಣಿಸಿಕೊಳ್ಳುಲು ಬಿಜೆಪಿಯಿಂದ ಸಾಧ್ಯವಾಗುತ್ತಿಲ್ಲ. ಸದ್ಯದಲ್ಲೇ ನಡೆಯಲಿರುವ ದೆಹಲಿ ವಿಧಾನಸಭೆ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳು ಬಿಜೆಪಿಗೆ ಸವಾಲಾಗಿ ಪರಿಣಮಿಸುವ ನಿರೀಕ್ಷೆಯಿದೆ. ಚುನಾವಣಾ ಕಾರ್ಯಸೂಚಿ ಮತ್ತು ಕಾರ್ಯತಂತ್ರ ರೂಪಿಸುವಾಗ ಬಿಜೆಪಿ ಹಿರಿಯರು ಇನ್ನೂ ಮುಂದೆ ಹೆಚ್ಚು ಜಾಗೃತೆ ವಹಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
Comments are closed.