ಬೆಂಗಳೂರು: ಹಿಂದೂ ಮತ್ತು ಮುಸ್ಲೀಮರನ್ನು ದೂರ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು, ಈ ಯತ್ನದಲ್ಲಿ ಕಾಂಗ್ರೆಸ್ ಯಶಸ್ಸು ಕಾಣುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟೀಷರು ಭಾರತವನ್ನು ಒಡೆದರು. ಇದೀಗ ಕಾಂಗ್ರೆಸ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹಿಂದೂ ಮತ್ತು ಮುಸ್ಲೀಮರನ್ನು ದೂರ ಮಾಡಲು ಯತ್ನಿಸುತ್ತಿದೆ. ರಾಜಕೀಯಕ್ಕೋಸ್ಕರ ಮುಸ್ಲೀಮರನ್ನು ಎತ್ತಿಕಟ್ಟುತ್ತಿದೆ. ಗಲಭೆಗಳನ್ನು ಉಂಟುಮಾಡಲು ಮುಸ್ಲೀಮರನ್ನು ಬೀದಿಗೆ ಇಳಿಸುತ್ತಿದೆ. ಹಿಂದೂಗಳಿಂದ ಮುಸ್ಲೀಮರನ್ನು ದೂರವಿಡುವ ಕಾಂಗ್ರೆಸ್‍ನ ಪ್ರಯತ್ನ ವಿಫಲವಾಗುತ್ತದೆ. ಈಗಾಗಲೇ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಇನ್ನೂ ನಷ್ಟ ಅನುಭವಿಸುತ್ತದೆ. ಇದೇ ಪ್ರಯತ್ನಗಳನ್ನು ಮುಂದುವರೆಸಿದರೆ ಈಗಾಗಲೇ ನಶಿಸಿ ಹೋಗಿರುವ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲೀಮರಿಗೆ ಯಾವುದೇ ತೊಂದರೆ ಇಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸಿದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಅಷ್ಟೇ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕಾಯ್ದೆಯಿಂದ ಯಾರೊಬ್ಬರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ ಸಬ್-ಕ-ಸಾತ್, ಸಬ್-ಕ-ವಿಕಾಸ್, ಸಬ್-ಕ-ವಿಶ್ವಾಸ್ ಬಿಜೆಪಿಯ ಮಂತ್ರವಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
Comments are closed.