ಕರ್ನಾಟಕದ ಜನರ ಬೇಡಿಕೆಯಂತೆ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಸರ್ಕಾರವು ಎಲ್ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಿದೆಯಂತೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಹಾಗೂ ಆಹಾರ ಸಚಿವೆ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ತಿಳಿಸಿದ್ದಾರೆ.
ಸಚಿವೆ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಕುರಿತು ಸಭೆ ನಡೆಸಿದ ನಂತರ ಮಾತನಾಡಿ, ‘ಶಾಲಾ ಪೂರ್ವ ತರಗತಿ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶಿಕ್ಷಣ ಸಚಿವರು, ಇಲಾಖೆ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಸೇರಿ ನಮ್ಮ ಇಲಾಖೆ ಹಿರಿಯ ಅಧಿಕಾರಿಗಳ ಜಂಟಿ ಸಭೆ ನಡೆಸಲಾಗುವುದು ಎಂದಿದ್ದಾರೆ’.
‘ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ LKG-UKG ಆರಂಭಿಸುವುದರಿಂದ ಹತ್ತಿರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುವ ಸಾಧ್ಯತೆ ಇದೆ, ಎಂಬ ಕಾರಣದಿಂದ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಇತರರ ಆತಂಕದ ಅಭಿಪ್ರಾಯಗಳಿಂದ ಈ ಚಿಂತನೆಯನ್ನು ಮುಂದೂಡಲಾಗಿತ್ತು. ಆದರೆ ಶೀಘ್ರದಲ್ಲಿ ಈ ಯೋಜನೆಗೆ ಉಭಯ ಇಲಾಖೆ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದಿದ್ದಾರೆ.
‘ಸರ್ಕಾರಿ ಶಾಲೆಗಳಲ್ಲಿ ಆರಂಭಿಸಬೇಕಾದರೆ ಹೆಚ್ಚುವರಿ ಕೊಠಡಿ ನಿರ್ಮಾಣ , ಶಿಕ್ಷಕರ ನೇಮಕ ಇತ್ಯಾದಿ ಕೆಲಸ ಮಾಡಬೇಕಾಗುತ್ತದೆ. ಆದರೆ, ಅಂಗನವಾಡಿಗಳಲ್ಲಿ ಈ ಸಮಸ್ಯೆ ಎದುರಾಗುವುದಿಲ್ಲ’ ಎಂದು ತಿಳಿಸಿದ್ದಾರೆ.
Comments are closed.