ಶಿಮ್ಲಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಪೌರತ್ವ ತಿದ್ದುಪಡಿ ಮಸೂದೆ ವಿಚಾರವಾಗಿ ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಈ ಶಾಸನವೂ ಯಾರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಐತಿಹಾಸಿಕ ರಿಡ್ಜ್ ಮೈದಾನ್ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ಈ ಕಾಯ್ದೆಯಿಂದ ಮುಸ್ಲಿಮರು ತಮ್ಮ ಪೌರತ್ವ ಕಳೆದುಕೊಳ್ಳಲಿದ್ದಾರೆ ಎಂಬ ವದಂತಿಯನ್ನು ಕಾಂಗ್ರೆಸ್ ಮತ್ತು ಅದರ ಕಂಪನಿಗಳು ಹಬ್ಬಿಸುತ್ತಿವೆ ಎಂದು ಹೇಳಿದರು.
ರಾಹುಲ್ ಬಾಬಾ (ರಾಹುಲ್ ಗಾಂಧಿ)ಗೆ ನಾನು ಸವಾಲು ಹಾಕುತ್ತೇನೆ, ಕಾಯ್ದೆಯಲ್ಲಿ ಒಂದೇ ಒಂದು ಸಾಲಿನಲ್ಲಿ ಯಾರಾದರೂ ಒಬ್ಬರ ಪೌರತ್ವವನ್ನು ಹಿಂಪಡೆಯಲಾಗುತ್ತದೆ ಎಂಬುದನ್ನು ತೋರಿಸಲಿ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ದಿಕ್ಕು ತಪ್ಪಿಸಬೇಡಿ ಮತ್ತು ಜನರನ್ನು ಒಡೆಯಬೇಡಿ ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಬೇಕಾದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನೋಡಲಿ. ಕಾಯ್ದೆಯ ಪ್ರತಿ ಈಗ ಸರ್ಕಾರಿ ವೆಬ್ಸೈಟ್ನಲ್ಲಿ ಲಭ್ಯವಿದೆ. ಇದರಲ್ಲಿ ಯಾರೊಬ್ಬರು ಪೌರತ್ವ ಕಳೆದುಕೊಳ್ಳುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಘ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ಒದಗಿಸುವಂತಹದ್ದು ಎಂದು ಅಮಿತ್ ಶಾ ತಿಳಿಸಿದರು.
Comments are closed.