ರಾಷ್ಟ್ರೀಯ

ಒವೈಸಿ ಅವರನ್ನು ಶಾಶ್ವತವಾಗಿ ಜೈಲಿಗಟ್ಟಿ: ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ

Pinterest LinkedIn Tumblr


ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಯನ್ನು ವಿರೋಧಿಸಿ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಈ ಮಧ್ಯೆ ತೆಲಂಗಾಣದ ನಿಜಾಮಾಬಾದ್‌ ನಿಂದ ಬಿಜೆಪಿ ಸಂಸದರಾಗಿರುವ ಅರವಿಂದ್ ಧರ್ಮಪುರಿ ಅಸದುದ್ದೀನ್ ಒವೈಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತೆಲಂಗಾಣ ಪುರಸಭೆ ಚುನಾವಣೆಗೆ ಹಿನ್ನೆಲೆ ನಿಜಾಮಾಬಾದ್‌ನಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ ಎಂಬ ಮಾಹಿತಿ ನೀಡಿರುವ ಧರ್ಮಪುರಿ, ಒವೈಸಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಈ ಕುರಿತು ತಾವು ಜಿಲ್ಲಾಧಿಕಾರಿ, ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ಪತ್ರ ಕೂಡ ರವಾನಿಸಿರುವುದಾಗಿಯೂ ಕೂಡ ಅವರು ಹೇಳಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ತೆಲಂಗಾಣದ ನಿಜಾಮಾಬಾದ್‌ನ ಬಿಜೆಪಿ ಸಂಸದ ಅರವಿಂದ್ ಧರ್ಮಪುರಿ, “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕೋಮುವಾದಿ ಹಾಗೂ ಸಂವಿಧಾನಿಕ ಎಂದು ಅಸದುದ್ದೀನ್ ಒವೈಸಿ ಹೇಳಿದ್ದು, ತೆಲಂಗಾಣ ಪುರಸಭೆ ಚುನಾವಣೆ ಹಿನ್ನೆಲೆ ನಿಜಾಮಾಬಾದ್‌ನಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಒವೈಸಿ ಅವರು ಸಾರ್ವಜನಿಕ ಸಭೆಉದ್ದೇಶಿಸಿ ಮಾತನಾಡಲು ಸಾಧ್ಯವಿಲ್ಲ” ಎಂದಿದ್ದಾರೆ. ಅಷ್ಟೇ ಅಲ್ಲ ತಾವು ಈ ಬಗ್ಗೆ ಜಿಲ್ಲಾಧಿಕಾರಿ, ಚುನಾವಣಾ ಆಯೋಗ ಮತ್ತು ಪೊಲೀಸರಿಗೆ ಪತ್ರ ಕೂಡ ಬರೆದಿರುವುದಾಗಿ ತಿಳಿಸಿದ್ದಾರೆ.

“ದೇಶವನ್ನು ವಿಭಜಿಸಲು ಅಸದುದ್ದೀನ್ ಒವೈಸಿ ಇಲ್ಲಿಗೆ ಬರುತ್ತಿದ್ದಾರೆಯೇ? ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಜನರ ಪರವಾಗಿ ಹೋರಾಡಲು ಅವರು ಬಯಸುತ್ತಾರೆಯೇ? ಎಂದು ಪ್ರಶ್ನಿಸಿರುವ ಧರ್ಮಪುರಿ, ಒವೈಸಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರ ಮೇಲೆ ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಿ, ಅವರನ್ನು ಶಾಶ್ವತವಾಗಿ ಜೈಲಿಗಟ್ಟಬೇಕು” ಎಂದಿದ್ದಾರೆ.

ಬಿಹಾರದ ಮುಸ್ಲಿಂ ಬಾಹುಳ್ಯವಿರುವ ಕಿಶನ್ ಗಂಜ್ ಜಿಲ್ಲೆಯಲ್ಲಿ ಭಾನುವಾರ ಒವೈಸಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಅಲ್ಲಿನ AIMIM ಪ್ರದೇಶಾಧ್ಯಕ್ಷ ಆಖ್ತರುಲ್ ಇಮಾನ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನಿನ ವಿರುದ್ಧ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಭಾನುವಾರ ಕಿಶನ್ ಗಂಜ್ ಗೆ ಭೇಟಿ ನೀಡಲಿದ್ದು, ಈ ಸಭೆಯಲ್ಲಿ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಜೀತನ್ ರಾಮ್ ಮಾಂಝಿ ಕೂಡ ಶಾಮೀಲಾಗಲಿದ್ದಾರೆ ಎಂದಿದ್ದಾರೆ.

Comments are closed.