ಮುಂಬೈ

41 ಸಾವಿರ ಗಡಿ ದಾಟಿದ ಚಿನ್ನದ ದರ

Pinterest LinkedIn Tumblr


ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಒಂದೇ ದಿನ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 710 ರೂ. ಏರಿಕೆಯಾಗಿ 41,130 ರೂ.ಗೆ ತಲುಪಿದೆ. ಇದು ಚಿನ್ನದ ಬೆಲೆಯ ಸಾರ್ವಕಾಲಿಕ ದಾಖಲೆಯಾಗಿದೆ.

ಇದೇ ಮೊದಲ ಬಾರಿಗೆ ದೇಶದಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 41 ಸಾವಿರ ಗಡಿಯನ್ನು ದಾಟಿದ್ದು, 10 ಗ್ರಾಂ ಚಿನ್ನದ ಬೆಲೆ 2 ಸಾವಿರದಷ್ಟು ಹೆಚ್ಚಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.1.10 ರಷ್ಟು ಹೆಚ್ಚಳವಾಗಿದ್ದರೆ, 1 ಕೆಜಿ ಬೆಳ್ಳಿಯ ಬೆಲೆಯಲ್ಲಿ ಶೇ.0.83ರಷ್ಟು ಏರಿಕೆಯಾಗಿದೆ.

ಡಿಸೆಂಬರ್ ತಿಂಗಳ ಅಂತ್ಯದಿಂದಲೂ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇದು ಆಭರಣಕೊಳ್ಳುವವರಿಗೆ ನಿರಾಸೆಯನ್ನು ಮೂಡಿಸಿದೆ. ಅಮೆರಿಕ ಇರಾನ್ ದೇಶದ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮೇಲೆ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ಆಭರಣ ಅಂಗಡಿ ಮಾಲೀಕರು ವ್ಯಕ್ತಪಡಿಸಿದ್ದಾರೆ.

ಭಾರತದ ಜನರು ಸಂಪೂರ್ಣವಾಗಿ ಚಿನ್ನದ ಆಮದು ಮೇಲೆ ಅವಲಂಬಿತವಾಗಿದ್ದು, ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯಾಗುವ ನೇರ ಪರಿಣಾಮವನ್ನು ಎದುರಿಸಬೇಕಿದೆ. ಚೀನಾ ಹಾಗೂ ಅಮೆರಿಕ ನಡುವೆ ನಡೆಯುತ್ತಿರುವ ಟ್ರೆಡ್ ವಾರ್ ಪರಿಣಾಮವೂ ಚಿನ್ನದ ಬೆಲೆಯ ಮೇಲೆ ಬೀರುತ್ತಿದೆ. ಭಾರತದ ವಿಶ್ವದಲ್ಲೇ ಅತಿ ದೊಡ್ಡ ಚಿನ್ನ ಆಮದು ಮಾಡುವ ದೇಶವಾಗಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತದ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. 2019-20ರ ಅಂಕಿ ಅಂಶಗಳ ಅನ್ವಯ ಚಿನ್ನದ ಆಮದು ಪ್ರಮಾಣ 1.43 ಲಕ್ಷ ಕೋಟಿಗಳಷ್ಟಿದೆ. ವಾರ್ಷಿಕವಾಗಿ 800 ರಿಂದ 900 ಟನ್‍ನಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ತೈಲ ಬೆಲೆ ಏರಿಕೆ:
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್ ಏರಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.4.39 ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 69.16 ಡಾಲರ್(ಅಂದಾಜು 4,900 ರೂ.) ತಲುಪಿದೆ. ಈ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 66.25 ಡಾಲರ್(ಅಂದಾಜು 4,700 ರೂ.) ಇತ್ತು.

Comments are closed.