ತಿರುವನಂತಪುರಂ: ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾಯಕಿ ಅನುರಾಧ ಪೋಡ್ವಾಲ್ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಮಹಿಳೆಯೊಬ್ಬರು ತಾನು ಅನುರಾಧ ಪೋಡ್ವಾಲ್ ಮಗಳು, ನನ್ನನ್ನು ದೂರ ಇಟ್ಟಿದ್ದಕ್ಕೆ ಅನುರಾಧ ಅವರಿಂದ ನನಗೆ 50 ಕೋಟಿ ರೂ. ಪರಿಹಾರ ಕೊಡಿಸಿ ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ಮಲಾ ಮೊಡೆಕ್ಸ್(45) ಅನುರಾಧ ಅವರಿಂದ 50 ಕೋಟಿ ರೂ. ಪರಿಹಾರ ಕೊಡಿಸುವಂತೆ ತಿರುವನಂತಪುರ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನುರಾಧ ಹಾಗೂ ಅರುಣ್ ಪೋಡ್ವಾಲ್ ನನ್ನ ತಂದೆ ತಾಯಿ. ನಾನು ಹುಟ್ಟಿದ ನಾಲ್ಕೇ ದಿನಕ್ಕೆ ತಂದೆ ತಾಯಿ ನನ್ನನ್ನು ದೂರ ಮಾಡಿದ್ದರು. ಪೊನ್ನಚ್ಚನ್ ಹಾಗೂ ಅಗ್ನಿಸ್ ದಂಪತಿ ಮಡಲಿಗೆ ನನ್ನನ್ನು ಹಾಕಿ ತಂದೆ, ತಾಯಿ ಹೋಗಿದ್ದರು. ತಮ್ಮ ಬ್ಯುಸಿ ಕೆಲಸದ ಕಾರಣದಿಂದ ನನ್ನನ್ನು ಸಾಕಲು ಆಗದೇ ಅವರು ನನ್ನಿಂದ ದೂರವಾಗಿದ್ದರು ಎಂದು ಕರ್ಮಾಲಾ ತಿಳಿಸಿದ್ದಾರೆ.
ಇಷ್ಟು ವರ್ಷದ ಮೇಲೆ ತಾಯಿಯ ನೆನಪು ಯಾಕೆ ಆಯ್ತು ಎಂದು ಪ್ರಶ್ನಿಸಿದಾಗ, ದತ್ತು ತಂದೆ ಪೊನ್ನಚ್ಚನ್ ಅವರು ಸಾಯುವ ಕೊನೆ ಕ್ಷಣದಲ್ಲಿ ನನಗೆ ಸತ್ಯ ತಿಳಿಸಿದರು. ನೀನು ನಮ್ಮ ಮಗಳಲ್ಲ ಅನುರಾಧ ಹಾಗೂ ಅರುಣ್ ಪೋಡ್ವಾಲ್ ಮಗಳು ಎಂದು ನನ್ನ ಜನ್ಮರಹಸ್ಯ ತೆರೆದಿಟ್ಟರು ಎಂದು ಕರ್ಮಾಲಾ ಹೇಳಿದ್ದಾರೆ.
ದತ್ತು ತಂದೆ ಸಾವನ್ನಪ್ಪಿದ ಬಳಿಕ ನಾನು ನನ್ನ ಸ್ವಂತ ತಾಯಿಗೆ(ಅನುರಾಧ) ಕರೆ ಮಾಡಿದೆ. ನನ್ನನ್ನು ಮಗಳೆಂದು ಒಪ್ಪಿಕೊಳ್ಳುವಂತೆ ಹೇಳಿದೆ. ಆದರೆ ಅವರು ನನಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ನನ್ನ ದತ್ತು ತಂದೆ-ತಾಯಿಗೆ ಮೊದಲೇ ಮೂವರು ಮಕ್ಕಳಿದ್ದರು. ಆದರೂ ಅವರು ನನ್ನನ್ನು ದತ್ತು ಪಡೆದು ಸ್ವಂತ ಮಗಳಂತೆ ಸಾಕಿ ಸಲುಹಿದ್ದಾರೆ. ಜೀವನ ನಡೆಸಲು ಕಷ್ಟವಿದ್ದರೂ ನನ್ನು ಸಾಕಿದ್ದಾರೆ ಎಂದಿದ್ದಾರೆ.
ಅಗ್ನಿಸ್ ಅವರಿಗೆ ಮರುವಿನ ಕಾಯಿಲೆ ಇದೆ. ಆದರೆ ಚಿಕಿತ್ಸೆಗಾಗಿ ಹಣವಿಲ್ಲ. ತುಂಬಾ ಕಷ್ಟಪಟ್ಟು ಜೀವನ ನಡೆಸುತ್ತಿದ್ದೇವೆ. ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ ಸಲುಹಿದ ತಾಯಿಗೆ ನಾನು ನೆರವಾಗಬೇಕಿದೆ. ಆದ್ದರಿಂದ ತನ್ನ ಸ್ವಂತ ತಾಯಿ ಅನುರಾಧ ಅವರ ನಮ್ಮ ಆಸ್ತಿಯಲ್ಲಿ ನನಗೆ ಪಾಲು ಕೊಡಬೇಕು. ನನ್ನನ್ನು ದೂರವಿಟ್ಟಿದ್ದಕ್ಕೆ ಪರಿಹಾರ ಕೊಡಬೇಕೆಂದು ಕರ್ಮಾಲಾ ಆಗ್ರಹಿಸಿದ್ದಾರೆ.
ನಾನು ಸಾಕಷ್ಟು ಬಾರಿ ಅಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅಮ್ಮ ನನ್ನ ಕರೆಗಳಿಗೆ ಸ್ಪಂದಿಸಿಲ್ಲ. ನನ್ನ ನಂಬರ್ ಕೂಡ ಬ್ಲಾಕ್ ಮಾಡಿದ್ದಾರೆ. ಆದ್ದರಿಂದ ಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಕರ್ಮಾಲಾ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
Comments are closed.