ಬೆಂಗಳೂರು (ಡಿ.3): ನೆರೆ ಪರಿಹಾರ ಸೇರಿದಂತೆ ರಾಜ್ಯದ ವಿವಿಧ ಬೇಡಿಕೆಗೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಕಾರತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳ ಕಚೇರಿ, ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಈ ಬಗ್ಗೆ ದೆಹಲಿಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲು ಮತ್ತು ಇಲಾಖಾವಾರು ಕೇಂದ್ರ ಸಚಿವರುಗಳಿಗೆ ಪ್ರಸ್ತಾವನೆ ಸಲ್ಲಿಸಲು ಪ್ರಧಾನಮಂತ್ರಿಗಳು ಸೂಚಿಸಿದ್ದಾರೆ. ಅಲ್ಲದೇ ಪ್ರಧಾನಿಗಳು ಈ ವಿಷಯದ ಬಗ್ಗೆ ಖುದ್ದಾಗಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ಸಮಸ್ಯೆ ಕುರಿತು ಚರ್ಚೆ ನಡೆಸಲು ಮುಂದಾದ ಸಿಎಂ ಬಿಎಸ್ವೈಗೆ ಪ್ರಧಾನಿ ಅವಕಾಶ ನೀಡಲಿಲ್ಲ ಎಂಬ ಸುದ್ದಿ ಕುರಿತು ಇದೇ ವೇಳೆ ಸ್ಪಷ್ಟನೆ ನೀಡಿದ ಅವರು, ರೈತ ಸಮಾವೇಶ ಕಾರ್ಯಕ್ರಮದಲ್ಲಿ ರಾಜ್ಯದ ಅಹವಾಲನ್ನು ಪ್ರಧಾನಿಗೆ ಸಲ್ಲಿಸಿದೆ. ಇನ್ನೊಮ್ಮೆ ಅವರಲ್ಲಿ ಮನವಿ ಮಾಡುವ ಉದ್ದೇಶದಿಂದ ಅವರನ್ನು ವೈಯಕ್ತಿಕ ಭೇಟಿ ಮಾಡಲು ಮುಂದಾದೆ. ಇದನ್ನೇ ಕೆಲ ಕೆಲ ಮಾಧ್ಯಮಗಳಲ್ಲಿ ವಿಷಯವನ್ನು ತಿರುಚಿ ಪ್ರಧಾನಿಗಳು ರಾಜ್ಯದ ಬೇಡಿಕೆಗೆ ಮೌನವಹಿಸಿದ್ದರು ಎಂದು ಸುದ್ದಿ ಬಿತ್ತರಿಸಿದೆ. ಇದು ಸತ್ಯಕ್ಕೆ ದೂರವಾದ ಕಪೋಲಕಲ್ಪಿತ ಸುದ್ದಿ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ಪ್ರಧಾನಿಗಳು ರಾಜ್ಯದ ಬೇಡಿಕೆಗಳನ್ನು ಸ್ವೀಕರಿಸಿದ್ದಾರೆ. ನಮ್ಮ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರಾಜ್ಯದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು, ಪ್ರವಾಹ ಪರಿಹಾರ ಕಾರ್ಯಗಳಿಗಾಗಿ ಹೆಚ್ಚಿನ ನೆರವು – ಇದೆಲ್ಲವುಗಳಿಗೆ 50 ಸಾವಿರ ಕೋಟಿ ವಿಶೇಷ ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಪ್ರಧಾನಿಗಳಿಗೆ ದಕ್ಷ, ಪಾರದರ್ಶಕ, ಪ್ರಾಮಾಣಿಕ ಆಡಳಿತ ವೈಖರಿ ಇಡೀ ಜಗತ್ತಿಗೆ ಗೊತ್ತಿದೆ. ಮೋದಿ ಸರ್ಕಾರ ರೈತರಿಗೆ ಅಭೂತಪೂರ್ವ ನೆರವು ನೀಡಿದೆ, ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ. ನಮ್ಮ ರಾಜ್ಯದ ಕೃಷಿಕರ, ನೀರಾವರಿ ಯೋಜನೆಗಳ ವಾಸ್ತವತೆಗಳೂ ಪ್ರಧಾನಿಗಳಿಗೆ ತಿಳಿದಿದೆ. ಅವರು ನಮ್ಮ ಅತ್ಯುನ್ನತ ನಾಯಕರು. ಕರ್ನಾಟಕಕ್ಕೆ ಅತಿ ಹೆಚ್ಚಿನ ನೆರವು, ಅನುದಾನ ನೀಡಿರುವುದು ಮೋದಿಯವರೇ ಎನ್ನುವುದೂ ಕೂಡ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.
Comments are closed.