ಢಾಕಾ: ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ದೇಶಾದ್ಯಂತ ಜಾರಿಗೊಳಿಸುವುದಾಗಿ ಭಾರತ ಪ್ರಕಟಿಸಿದ ಬೆನ್ನಲ್ಲಿಯೇ 445 ಬಾಂಗ್ಲಾದೇಶಿಯರು ಸ್ವದೇಶಕ್ಕೆ ಮರಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಮಹಾನಿರ್ದೇಶಕ ಮೇಜರ್ ಜನರಲ್ ಮೊಹಮದ್ ಷಫೀನುಲ್ ಇಸ್ಲಾಂ ಅವರು, ”2019ರಲ್ಲಿ ಸುಮಾರು 1,000 ಜನ ಗಡಿ ದಾಟಿ ಭಾರತ ಪ್ರವೇಶಿಸಿದ್ದಾರೆ. ಆ ಪೈಕಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 445 ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಸ್ಥಳೀಯ ಪ್ರತಿನಿಧಿಗಳ ಮೂಲಕ ಅವರ ಗುರುತು ದೃಢಪಡಿಸಿಕೊಂಡು ದೇಶದೊಳಕ್ಕೆ ಬರ ಮಾಡಿಕೊಳ್ಳಲಾಗಿದೆ,” ಎಂದು ಇಸ್ಲಾಂ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್ಎಫ್) ಜತೆಗಿನ ದ್ವಿಪಕ್ಷೀಯ ಮಾತುಕತೆಗಾಗಿ ಕಳೆದ ವಾರ ಭಾರತಕ್ಕೆ ಭೇಟಿ ನೀಡಿದ್ದ ಅವರು ಎನ್ಆರ್ಸಿ ಕುರಿತು ಸರಕಾರದಿಂದ ಮಾಹಿತಿ ಪಡೆದಿದ್ದರು. ಬಳಿಕ, ”ಇದು ಭಾರತದ ಆಂತರಿಕ ಪ್ರಕ್ರಿಯೆ. ಈ ಕುರಿತು ನಾವು ಆತಂಕಪಡುವ ಅಗತ್ಯವಿಲ್ಲ,” ಎಂದು ಹೇಳಿದ್ದರು. ಭಾರತ-ಬಾಂಗ್ಲಾಒಟ್ಟು 4,096 ಕಿ.ಮೀ ಉದ್ದದ ಗಡಿ ಹಂಚಿಕೊಂಡಿವೆ.
ಬಾಂಗ್ಲಾಕ್ಕೆ ಮಾಹಿತಿ: ಎನ್ಆರ್ಸಿ ಕುರಿತು ಬಾಂಗ್ಲಾದೇಶಕ್ಕೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಕಳವಳ ಪಡುವ ಅಗತ್ಯವಿಲ್ಲವೆಂದು ಭರವಸೆ ನೀಡಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
Comments are closed.