ಕರಾವಳಿ

ಕರಾವಳಿ ಉತ್ಸವಕ್ಕೆ ಮೆರುಗು : ಬಾನಂಗಳದಲ್ಲಿ ಹಾರಾಡಲಿದೆ ಚಿತ್ತಾಕರ್ಷಕ ಗಾಳಿಪಟ

Pinterest LinkedIn Tumblr

ಮಂಗಳೂರು ಜನವರಿ 05 : ಈ ಸಾಲಿನ ಕರಾವಳಿ ಉತ್ಸವವು ಜನವರಿ 10ರಿಂದ ಪ್ರಾರಂಭವಗಲಿದ್ದು, ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ನಡೆಯಲಿದೆ.

ಕರಾವಳಿ ಉತ್ಸವದ ಕೊನೆಯ ಮೂರು ದಿನ ಜನವರಿ 17ರಿಂದ 19ರವರೆಗೆ ಪಣಂಬೂರು ಬೀಚ್‍ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ದೇಶದ ನುರಿತ ಗಾಳಿಪಟ ಕ್ರೀಡಾಳುಗಳೊಂದಿಗೆ ಹಲವು ವಿದೇಶೀ ರಾಷ್ಟ್ರಗಳ ಗಾಳಿಪಟ ಕ್ರೀಡಾಳುಗಳೂ ಭಾಗವಹಿಸಿ, ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.

ಈಗಾಗಲೇ ಹಲವು ರಾಷ್ಟ್ರಗಳ ಗಾಳಿಪಟ ಕ್ರೀಡಾಳುಗಳು ಮಂಗಳೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಆಗಮಿಸಲು ಒಪ್ಪಿಕೊಂಡಿದ್ದು, ಸಿದ್ಧತೆಗಳು ನಡೆಯುತ್ತಿವೆ.

ವಿದೇಶೀ ಗಾಳಿಪಟ ಹಾರಾಟಗಾರರು ಜಗತ್ತಿನ ವಿವಿದೆಡೆ ನಡೆದ ಹಲವಾರು ಪ್ರಮುಖ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದು, ಗಾಳಿಪಟದ ವಿಷಯ ಆಯ್ಕೆ ಹಾಗೂ ವಿನ್ಯಾಸದಲ್ಲಿ ನುರಿತ ಪರಿಣತಿಯನ್ನು ಹೊಂದಿದ್ದಾರೆ.

ಸಿಂಗಾಪುರ, ಕಾಂಬೋಡಿಯಾ, ಇಂಡೋನೇಶ್ಯಾ, ಫಿಲಿಪೈನ್ಸ್, ಸ್ಕಾಟ್‍ಲ್ಯಾಂಡ್, ತುರ್ಕಿ, ಥಾಯ್‍ಲ್ಯಾಂಡ್, ನೆದರ್‍ಲ್ಯಾಂಡ್, ಹಾಲೆಂಡ್ ದೇಶದ ಗಾಳಿಪಟ ಹಾರಾಟಗಾರರು ಕರಾವಳಿ ಉತ್ಸವದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ಜೂರಿಚ್ ರಾಷ್ಟ್ರದ ಗಾಳಿಪಟ ಹಾರಾಟಗಾರರು ಭಾಗವಹಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ.

ಜಿಲ್ಲಾಡಳಿತ ವತಿಯಿಂದ ಈಗಾಗಲೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಯಶಸ್ಸಿಗೆ ಉಪಸಮಿತಿ ರಚಿಸಲಾಗಿದೆ. ಕ್ರೀಡಾಳುಗಳ ಪ್ರಯಾಣ, ವಸತಿ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆಗಳು ನಡೆಯುತ್ತಿವೆ.

Comments are closed.