ಅಂತರಾಷ್ಟ್ರೀಯ

ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ

Pinterest LinkedIn Tumblr


ಬಾಗ್ದಾದ್: ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್ ಎರಡು ರಾಕೆಟ್ ದಾಳಿ ನಡೆಸಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಸೈನಿಕರು ನೆಲೆಸಿರುವ ಬಾಗ್ದಾದ್‍ನ ಉತ್ತರದ ಬಾಲಾಡ್ ವಾಯುನೆಲೆಗೆ ಎರಡು ಕತ್ಯುಷಾ ರಾಕೆಟ್‍ಗಳು ಅಪ್ಪಳಿಸಿವೆ ಎಂದು ಭದ್ರತಾ ಮೂಲಗಳು ಹಾಗೂ ಇರಾಕಿ ಮಿಲಿಟರಿ ತಿಳಿಸಿದೆ. ಅಮೆರಿಕ ವಾಯುಪಡೆಯ ಶುಕ್ರವಾರ ನಡೆಸಿದ ದಾಳಿಗೆ ಇರಾನ್‍ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವನ್ನಪ್ಪಿದ ಬಳಿಕ ಯುದ್ಧ ಭೀತಿ ಎದುರಾಗಿದೆ. ಇದೀಗ ಅಮೆರಿಕ ಸೇನೆ ತಂಗಿದ್ದ ಸ್ಥಳದಲ್ಲೇ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಬಾಗ್ದಾದ್‍ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮತ್ತು ದೇಶಾದ್ಯಂತ ಬೀಡುಬಿಟ್ಟಿರುವ 5,200 ಅಮೆರಿಕದ ಸೈನಿಕರು ರಾಕೆಟ್ ದಾಳಿಯನ್ನು ಎದುರಿಸುತ್ತಿದ್ದಾರೆ. ಇರಾನ್‍ನ ಸೇನಾಧಿಕಾರಿಯನ್ನು ಬಾಗ್ದಾದ್‍ನಲ್ಲಿ ರಾಕೆಟ್ ದಾಳಿಯ ಮೂಲಕ ಕೊಂದ ಕೆಲವೇ ಗಂಟೆಗಳ ಬಳಿಕ ಅಮೆರಿಕ ಮತ್ತೆ ವಾಯುದಾಳಿ ನಡೆಸಿತ್ತು. ಶನಿವಾರ ಬೆಳಗ್ಗೆ ಇರಾಕ್‍ನ ಹಶೆಬ್ ಅಲ್ ಶಾಬಿ ಅರೆಸೇನಾ ಪಡೆಯ ವಾಹನಗಳ ಅಮೆರಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು ಆರು ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು.

ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದರು. ಜೊತೆಗೆ ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಸಮರ್ಥಿಸಿಕೊಂಡಿದ್ದರು.

Comments are closed.