ರಾಷ್ಟ್ರೀಯ

ಪಾಕ್ ನ ಪ್ರಥಮ ಸಿಖ್ ನ್ಯೂಸ್ ಆ್ಯಂಕರ್ ಹರ್ಮೀತ್ ಸಿಂಗ್ ಸಹೋದರನ ಹತ್ಯೆ

Pinterest LinkedIn Tumblr


ನವದೆಹಲಿ(ಜ. 05): ಪಾಕಿಸ್ತಾನದ ನನಕಾನ ಸಾಹೀಬ್ ಗುರುದ್ವಾರದ ಮೇಲೆ ವಿಧ್ವಂಸಕರು ದಾಳಿ ನಡೆಸಿದ ಕೆಲ ದಿನಗಳಲ್ಲೇ ಅಲ್ಲಿಯ ಸಿಖ್ ಸಮುದಾಯದ ವ್ಯಕ್ತಿಯೊಬ್ಬರನ್ನು ಆಗುಂತಕರು ಬಲಿಪಡೆದಿರುವ ಘಟನೆ ವರದಿಯಾಗಿದೆ. ಪೇಶಾವರ ನಗರದಲ್ಲಿ 25 ವರ್ಷದ ರವೀಂದರ್ ಸಿಂಗ್ ಹತ್ಯೆಯಾಗಿದ್ದಾರೆ. ಪಾಕಿಸ್ತಾನದ ನ್ಯೂಸ್ ಆ್ಯಂಕರ್ ಹರ್ಮೀತ್ ಸಿಂಗ್ ಅವರ ಸಹೋದರರಾಗಿದ್ದಾರೆ. ಹರ್ಮೀತ್ ಅವರು ಪಾಕಿಸ್ತಾನದಲ್ಲಿ ನ್ಯೂಸ್ ಆ್ಯಂಕರ್ ಆದ ಮೊದಲ ಸಿಖ್ ಧರ್ಮೀಯರೆನಿಸಿದ್ದಾರೆ. ರವೀಂದರ್ ಸಿಂಗ್ ಹತ್ಯೆಯಾಗಿರುವುದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆಂಬ ವಾದಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

“ಪೇಶಾವರದಲ್ಲಿ ಅಪರಿಚಿತ ವ್ಯಕ್ತಿಗಳಿಂದ ರವೀಂದರ್ ಸಿಂಗ್ ಹತ್ಯೆಯಾಗಿದೆ. ಅವರ ಮೃತ ದೇಹವು ಇಂದು ಭಾನುವಾರ ಚಮಕಾನಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ಸಿಕ್ಕಿದೆ. ಘಟನೆಯ ತನಿಖೆ ನಡೆಸಲಾಗುತ್ತಿದೆ” ಎಂದು ಆ ನಗರದ ಅಧಿಕಾರಿಗಳು ಹೇಳಿರುವುದನ್ನು ಉಲ್ಲೇಖಿಸಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರವೀಂದರ್ ಸಿಂಗ್ ಅವರ ಹತ್ಯೆ ಘಟನೆಯನ್ನು ಭಾರತ ಸರ್ಕಾರ ಬಲವಾಗಿ ಖಂಡಿಸಿದೆ. ಪಾಕಿಸ್ತಾನವು ಉಡಾಫೆ ಧೋರಣೆ ತೋರದೆ ಸಿಂಗ್ ಹತ್ಯೆಗೆ ಕಾರಣರಾದವರನ್ನು ಹಿಡಿದು ತಕ್ಕ ಶಿಕ್ಷೆ ಜರುಗಿಸಬೇಕು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗ್ರಹಿಸಿ ಹೇಳಿಕೆ ನೀಡಿದೆ.

“ನನಕಾನ ಸಾಹೀಬ್​ನಲ್ಲಿರುವ ಶ್ರೀ ಜನಮ್ ಆಸ್ಥಾನ್ ಗುರುದ್ವಾರದಲ್ಲಿ ನಡೆದ ದಾಳಿ ಘಟನೆ ಹಾಗೂ ಸಿಖ್ ಹುಡುಗಿ ಜಗಜೀತ್ ಕೌರ್ ಅವರ ಅಪಹರಣ, ಬಲವಂತ ಮತಾಂತರ ಮತ್ತು ಬಲವಂತ ವಿವಾಹ ಘಟನೆ ನಡೆದಿವೆ. ಇದರ ಬೆನ್ನಲ್ಲೇ ಪೇಶಾವರದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದವರನ್ನು ಗುರಿಯಾಗಿಸಿ ಹತ್ಯೆಯಾಗಿದೆ. ಈ ಘಟನೆಯನ್ನು ಭಾರತ ಬಲವಾಗಿ ಖಂಡಿಸುತ್ತದೆ” ಎಂದು ಭಾರತ ಸರ್ಕಾರ ಹೇಳಿದೆ.

ಪಾಕಿಸ್ತಾನದಲ್ಲಿರುವ ನನಕಾನ ಸಾಹೀಬ್ ಜಿಲ್ಲೆಯು ಸಿಖ್ ಧರ್ಮದ ಮೊದಲ ಗುರು ನಾನಕ್ ಅವರ ಜನ್ಮಸ್ಥಳವಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ನನಕಾನ ಸಾಹೀಬ್​ನಲ್ಲಿರುವ ಸಿಖ್ ಗುರುದ್ವಾರವೊಂದರ ಮೇಲೆ ಅಲ್ಲಿಯ ಕೆಲ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿ ಕಲ್ಲು ತೂರಾಟ ಮಾಡಿತ್ತು. ಈ ಘಟನೆಯನ್ನು ಖಂಡಿಸಿ ಭಾರತದಲ್ಲಿ ನಿನ್ನೆ ಪ್ರತಿಭಟನೆಗಳು ನಡೆದಿದ್ದವು. ಪಕ್ಷಾತೀತವಾಗಿ ಮತ್ತು ಧರ್ಮಾತೀತವಾಗಿ ಜನರು ದೆಹಲಿಯಲ್ಲಿರುವ ಪಾಕ್ ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರು.

ಗುರುದ್ವಾರ ದಾಳಿ ಘಟನೆಯಲ್ಲಿ ಭಾಗಿಯಾದ ಆರೋಪಿಗಳನ್ನು ಅಲ್ಲಿನ ಸರ್ಕಾರ ಬಂಧಿಸಿರುವುದಾಗಿ ತಿಳಿಸಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈ ಘಟನೆಯನ್ನು ಬಲವಾಗಿ ಖಂಡಿಸಿದ್ದರು. ತಮ್ಮ ಆಡಳಿತದಲ್ಲಿ ಇಂತಹ ವಿಧ್ವಂಸಕ ಕೃತ್ಯಗಳನ್ನು ಸಹಿಸಲಾಗುವುದಿಲ್ಲ ಎಂದು ಹೇಳಿದ್ದರು. ಅವರು ಖಂಡನೆ ವ್ಯಕ್ತಪಡಿಸಿದ ಮಾರನೆಯ ದಿನವೇ ಸಿಖ್ ಸಮುದಾಯದ ವ್ಯಕ್ತಿಯ ಕೊಲೆಯಾಗಿರುವುದು ವಿಪರ್ಯಾಸವೆನಿಸಿದೆ.

ಇನ್ನು, ಇವತ್ತು ಕೊಲೆಯಾದ ರವೀಂದರ್ ಸಿಂಗ್ ಅವರ ಹರ್ಮೀತ್ ಸಿಂಗ್ ಪಾಕಿಸ್ತಾನದ ಮೊದಲ ಸಿಖ್ ನ್ಯೂಸ್ ಆ್ಯಂಕರ್ ಎನಿಸಿ ದೇಶಾದ್ಯಂತ ಸಂಚಲನ ಮೂಡಿಸಿದ್ದಾರೆ. ಪಬ್ಲಿಕ್ ನ್ಯೂಸ್ ವಾಹಿನಿಯಲ್ಲಿ ಅವರು ಸುದ್ದಿ ನಿರೂಪಕರಾಗಿರುವ ಅವರು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಸುರಕ್ಷಿತ ವಾತಾವರಣ ಇದೆ ಎಂಬುದಕ್ಕೆ ತಾವೇ ಸಾಕ್ಷಿ ಎಂಬಂತೆ ಮಾತನಾಡಿದ್ದರು. ಈಗ ಅವರ ಸಹೋದರ ಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಬೇಕಿದೆ.

Comments are closed.