ಕ್ರೀಡೆ

ಶ್ರೀಲಂಕಾ ವಿರುದ್ಧ ಭಾರತಕ್ಕೆ ಗೆಲುವು: ವಿರಾಟ್ ಕೊಹ್ಲಿಯಿಂದ ಹಲವು ದಾಖಲೆ !

Pinterest LinkedIn Tumblr

ಇಂದೋರ್: ಹೊಸ ವರ್ಷದ ಭಾರತದ ಮೊದಲ ಕ್ರಿಕೆಟ್ ಸರಣಿಯಲ್ಲೂ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ದಾಖಲೆ ನಿರ್ಮಾಣ ಮಾಡಿದ್ದಾರೆ.

ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲೂ ಕೊಹ್ಲಿ ರನ್ ಸುರಿಮಳೆ ಮುಂದುವರೆದಿದ್ದು, ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ ಕೊಹ್ಲಿ ವಿಶಿಷ್ಛ ದಾಖಲೆಗಳ ನಿರ್ಮಾಣ ಮಾಡಿದ್ದಾರೆ.

ನಿನ್ನೆ ಶ್ರೀಲಂಕಾ ನೀಡಿದ್ದ 143 ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 17.3 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿ 7 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಪಂದ್ಯದ ಎಲ್ಲ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಟೀಮ್ ಇಂಡಿಯಾ ಎದುರಾಳಿಗಳ ಮೇಲೆ ಸವಾರಿ ಮಾಡಿತು. ಇದು ವರ್ಷಾರಂಭದ ಮೊದಲ ಗೆಲುವು ಕೂಡಾ ಹೌದು.

ನಾಯಕನಾಗಿ ಟಿ20ನಲ್ಲಿ ಸಹಸ್ರ ರನ್ ದಾಖಲೆ
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ನಾಯಕರಾಗಿ ಸಹಸ್ರ ರನ್ ಪೂರೈಸಿದ ಹಿರಿಮೆಗೆ ಭಾಜನವಾಗಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ ನಾಯಕರಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ ಸಹಸ್ರ ರನ್ ಪೂರೈಸಿದ ಮೊದಲ ನಾಯಕ ಎಂಬ ದಾಖಲೆಗೂ ಕೊಹ್ಲಿ ಭಾಜನವಾಗಿದ್ದಾರೆ. ಈ ಪಂದ್ಯಕ್ಕೂ ಮೊದಲು ನಾಯಕರಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1000 ರನ್ ಮೈಲುಗಲ್ಲು ತಲುಪಲು ಕೊಹ್ಲಿಗೆ 25 ರನ್‌ಗಳ ಅವಶ್ಯಕತೆಯಿತ್ತು. ನಿನ್ನೆ ನಡೆದ ಶ್ರೀಲಂಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗಿಳಿದು ಅಚ್ಚರಿ ಮೂಡಿಸಿದ ಕೊಹ್ಲಿ, ಕೇವಲ 17 ಎಸೆತಗಳಲ್ಲಿ ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ ಅಜೇಯ 30 ರನ್ ಗಳಿಸಿದರು. ಆ ಮೂಲಕ ಒಟ್ಟಾರೆಯಾಗಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ನಾಯಕನಾಗಿ 1000 ರನ್ ಗಳಿಸಿದ ಆರನೇ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನವಾಗಿದ್ದಾರೆ. 30ನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಧೋನಿ ದಾಖಲೆ ಸನಿಹ ವಿರಾಟ್ ಕೊಹ್ಲಿ
ಇನ್ನು ಭಾರತದ ಮಿಸ್ಚರ್ ಕೂಲ್ ಮಹೇಂದ್ರ ಸಿಂಗ್ ಧೋನಿ 62 ಪಂದ್ಯಗಳಲ್ಲಿ 1112 ರನ್ ಗಳಿಸಿದ್ದಾರೆ. ಈ ದಾಖಲೆ ಸನಿಹಕ್ಕೆ ಕೊಹ್ಲಿ ತೆರಳಿದ್ದು, ಈ ದಾಖಲೆ ಮುರಿಯಲು ಕೊಹ್ಲಿ 107 ರನ್ ಗಳ ಅವಶ್ಯಕತೆ ಇದೆ.

ಹಿಟ್‌ಮ್ಯಾನ್ ರೋಹಿತ್ ದಾಖಲೆ ಮುರಿದ ಕಿಂಗ್ ಕೊಹ್ಲಿ
ಈ ಮಧ್ಯೆ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ತಮ್ಮ ಸಹ ಆಟಗಾರ ರೋಹಿತ್ ಶರ್ಮಾ ಸಾಧನೆಯನ್ನು ಹಿಮ್ಮೆಟ್ಟಿಸಿರುವ ಕಿಂಗ್ ಕೊಹ್ಲಿ, ಮಗದೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 30 ರನ್ ಪೇರಿಸಿದ ಕೊಹ್ಲಿ ತಮ್ಮ ಟಿ20 ಮಾದರಿ ಕ್ರಿಕೆಟ್ ನಲ್ಲಿ ರನ್ ಗಳಿಕೆಯನ್ನು 2663 ರನ್ ಗಳಿಕೆ ಏರಿಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ 77ನೇ ಪಂದ್ಯಗಳಲ್ಲಿ (71 ಇನ್ನಿಂಗ್ಸ್) 53.26ರ ಸರಾಸರಿಯಲ್ಲಿ 2663 ರನ್ ಪೇರಿಸಿದ್ದಾರೆ. ಇದರಲ್ಲಿ 24 ಅರ್ಧಶತಕಗಳು ಸೇರಿವೆ. ಇನ್ನೊಂದೆಡೆ ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 104 ಪಂದ್ಯಗಳಲ್ಲಿ (96 ಇನ್ನಿಂಗ್ಸ್) 32.10ರ ಸರಾಸರಿಯಲ್ಲಿ 2633 ರನ್ ಗಳಿಸಿದ್ದಾರೆ. ಈ ಪಂದ್ಯಕ್ಕೂ ಮೊದಲು ರೋಹಿತ್ ದಾಖಲೆ ಮುರಿಯಲು ಕೊಹ್ಲಿ ಕೇವಲ ಒಂದು ರನ್ನಿನ ಅಗತ್ಯವಿತ್ತು. ಪ್ರಸ್ತುತ ಲಂಕಾ ಸರಣಿಯಿಂದ ರೋಹಿತ್ ಶರ್ಮಾ ಹೊರಗುಳಿದಿದ್ದು, ವಿಶ್ರಾಂತಿಯಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ:
ವಿರಾಟ್ ಕೊಹ್ಲಿ: 2663
ರೋಹಿತ್ ಶರ್ಮಾ: 2633
ಮಾರ್ಟಿನ್ ಗಪ್ಟಿಲ್: 2436
ಶೋಯೆಬ್ ಮಲಿಕ್: 2263
ಬ್ರೆಂಡನ್ ಮೆಕಲಮ್: 2140

Comments are closed.