ವಾಷಿಂಗ್ಟನ್ (ಜ.8): ಇರಾನ್ ಮೇಜರ್ ಜನರಲ್ ಖಾಸಿಂ ಸೊಲೆಮನಿಯ ಅಮೆರಿಕ ಹತ್ಯೆ ಮಾಡಿದ ನಂತರ ಎರಡೂ ದೇಶಗಳ ಸಂಬಂಧ ಮತ್ತಷ್ಟು ಹಳಸಿದೆ. ಮೂರನೇ ಮಹಾಯುದ್ಧ ನಡೆಯಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿರುವಾಗಲೇ ಇರಾಕ್ನಲ್ಲಿನ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಅಮೆರಿಕದ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.
“ಜನವರಿ 7ರಂದು ಸಂಜೆ 5.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಇರಾನ್ 12ಕ್ಕೂ ಹೆಚ್ಚು ಮಿಸೈಲ್ಗಳನ್ನು ಹಾರಿಸಿದೆ. ಇರಾಕ್ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಈ ಕ್ಷಿಪಣಿಗಳು ಇರಾಕ್ ನೆಲೆಯಿಂದ ಹಾರಿರುವುದು ಖಚಿತವಾಗಿದೆ. ಇರಾಕ್ ಹಾಗೂ ಅಮೆರಿಕ ಜಂಟಿಯಾಗಿ ಬಳಕೆ ಮಾಡುವ ವಾಯುನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಈ ದಾಳಿಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಹಾನಿಯಾಗಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಶುಕ್ರವಾರ ಮುಂಜಾನೆ ಬಾಗ್ದಾದ್ನಲ್ಲಿ ರಾಕೆಟ್ ದಾಳಿ ನಡೆಸುವ ಮೂಲಕ ಇರಾನ್ ಮೇಜರ್ ಜನರಲ್ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ಬೆನ್ನಲ್ಲೇ ಕೆಂಡಕಾರಿದ್ದ ಇರಾನ್, “ಅಮೆರಿಕ ಇಂತಹ ಅಪಾಯಕಾರಿ ಹಾಗೂ ಬುದ್ಧಿಹೀನ ಕೃತ್ಯಕ್ಕೆ ಕೈ ಹಾಕಬಾರದಿತ್ತು. ಇದರ ಮುಂದಿನ ಪರಿಣಾಮಗಳನ್ನು ಅಮೆರಿಕ ಖಂಡಿತವಾಗಿಯೂ ಅನುಭವಿಸಲಿದೆ,” ಎಂದು ಹೇಳಿತ್ತು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಇರಾನ್ ದಾಳಿ ನಡೆಸಿದೆ.
ಶುಕ್ರವಾರ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೆಮನಿ ಮೃತಪಟ್ಟಿದ್ದ. ಖಾಸಿಂ ಸೊಲೆಮನಿಯನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೆಮನಿ ಇರಾನ್ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಹೀಗಾಗಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಸಜ್ಜಾಗಿದೆ ಎನ್ನಲಾಗಿದೆ.
Comments are closed.