ಹೊಸದಿಲ್ಲಿ: ಕೇಬಲ್ ಮತ್ತು ಬ್ರಾಡ್ಕಾಸ್ಟಿಂಗ್ ಸೇವೆಗಳಿಗೆ ಸಂಬಂಧಿಸಿದ ‘ನೂತನ ನಿಯಂತ್ರಣ ನೀತಿ’ಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್ ತಿದ್ದುಪಡಿ ತಂದಿದೆ. ಈ ಪರಿಣಾಮ ಗ್ರಾಹಕರ ಡಿಟಿಎಚ್ ಮತ್ತು ಕೇಬಲ್ ಬಿಲ್ಗಳು ಈಗಿನ ದರಕ್ಕೆ ಹೋಲಿಸಿದರೆ, ಶೇ. 14ರಷ್ಟು ಇಳಿಕೆಯಾಗಲಿವೆ ಎಂದು ರೇಟಿಂಗ್ ಏಜೆನ್ಸಿ ಐಸಿಆರ್ಎ ಹೇಳಿದೆ.
ಕಡಿಮೆ ಶುಲ್ಕಕ್ಕೆ ಹೆಚ್ಚಿನ ಚಾನೆಲ್ಗಳನ್ನು ಗ್ರಾಹಕರು ವೀಕ್ಷಿಸುವಂತಾಗಲು ಟ್ರಾಯ್ ಕಳೆದ ವಾರ ಮಹತ್ವದ ತಿದ್ದುಪಡಿಯನ್ನು ತಂದಿದೆ. ಇದರನ್ವಯ ಕೇಬಲ್ ಬಿಲ್ ದರಗಳು ಮಾ. 1ರಿಂದ ಇಳಿಕೆಯಾಗಲಿವೆ ಎಂದು ಹೇಳಲಾಗಿದೆ.
ಡಿಟಿಎಚ್ ಅಥವಾ ಕೇಬಲ್ ಸಂಪರ್ಕವನ್ನು ಚಾಲನೆಯಲ್ಲಿ ಇಡಲು ಸಂಸ್ಥೆಗಳು ಪಡೆಯುತ್ತಿದ್ದ ಕಡ್ಡಾಯ ನೆಟ್ವರ್ಕ್ ಸಾಮರ್ಥ್ಯ ಶುಲ್ಕಕ್ಕೆ (ಎನ್ಸಿಎಫ್) 130 ರೂ.ಗಳ ಗರಿಷ್ಠ ಮಿತಿಯನ್ನು ಟ್ರಾಯ್ ನಿಗದಿಪಡಿಸಿದೆ. ಇದೇ ವೇಳೆ, ಉಚಿತ ಚಾನೆಲ್ಗಳನ್ನು ನೀಡಲು ಸೇವಾ ಸಂಸ್ಥೆಗಳು ಗರಿಷ್ಠ 160 ರೂ. ಗಿಂತಲೂ ಹೆಚ್ಚು ಶುಲ್ಕ ಪಡೆಯುವಂತಿಲ್ಲ ಎಂದು ಟ್ರಾಯ್ ಮಿತಿ ವಿಧಿಸಿದೆ.
ಅಂದರೆ, 160 ರೂ.ಗೆ ಕನಿಷ್ಠ 200 ಚಾನೆಲ್ಗಳನ್ನು ಕೇಬಲ್ ಆಪರೇಟರ್ಗಳು ನೀಡಬೇಕಾಗುತ್ತದೆ. 12 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಚಾನೆಲ್ಗಳನ್ನು ಮಾತ್ರ ‘ಗುಚ್ಛ’ಕ್ಕೆ (ಬೊಕೆ) ಸೇರಿಸಬೇಕು. ಒಂದಕ್ಕಿಂತ ಹೆಚ್ಚು ಟಿ.ವಿ ಇರುವ ಮನೆಗಳಲ್ಲಿ 2ನೇ ಸಂಪರ್ಕಕ್ಕೆ ಎನ್ಸಿಎಫ್ ಶುಲ್ಕ ಶೇ. 40 ಮಾತ್ರ ಇರಬೇಕು ಎಂದು ಸೂಚಿಸಲಾಗಿದೆ.
Comments are closed.