ಮಂಗಳೂರು ಜನವರಿ 09 : ಕಾಯ್ದೆ-1986 ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ನೇಮಿಸಿಕೊಳ್ಳುವುದನ್ನು ಹಾಗೂ 15ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್ ರಹಿತ) ಬಂಧಿಸಬಹುದಾದ ಅಪರಾಧವಾಗಿದೆ.
ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ)ಕಾಯ್ದೆ- 1986ರ ತಿದ್ದುಪಡಿ ಕಾಯ್ದೆ-2016ರನ್ವಯ 15ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಅಲ್ಲದ ಸಂಸ್ಥೆಗಳಲ್ಲಿ ನೇಮಿಸಲು ಅವಕಾಶ ಕಲ್ಪಿಸಿದ್ದು, ನಿಬಂಧನೆಗಳು ಇಂತಿವೆ;
ಕಿಶೋರಾವಸ್ಥೆಯ ಕಾರ್ಮಿಕನನ್ನು ದಿನದ ಸೂಕ್ತ ವೇಳೆಯಲ್ಲಿ 6 ಗಂಟೆಗಳಿಗೂ ಮೀರಿ ದುಡಿಸಿಕೊಳ್ಳುವಂತಿಲ್ಲ, ಕಿಶೋರಾವಸ್ಥೆಯ ಕಾರ್ಮಿಕನನ್ನು ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ದುಡಿಸಿಕೊಳ್ಳುವಂತಿಲ್ಲ ಅಲ್ಲದೇ ಕಡ್ಡಾಯವಾಗಿ ವಾರದ ರಜೆಯನ್ನು ನೀಡಬೇಕು, ಕಾರ್ಮಿಕ ನಿರೀಕ್ಷಕರಿಗೆ, ಕಿಶೋರಾವಸ್ಥೆಯ ಕಾರ್ಮಿಕನನ್ನು ದುಡಿಸಿಕೊಳ್ಳುತ್ತಿರುವ ಕುರಿತು ಮಾಲೀಕರು 30 ದಿನಗಳ ಒಳಗಾಗಿ ಲಿಖಿತವಾಗಿ ತಿಳಿಸಬೇಕು.
ನಿಬಂಧನೆಗಳನ್ನು ಉಲ್ಲಂಘಿಸಿದ ತಪ್ಪಿತಸ್ಥ ಮಾಲೀಕರಿಗೆ ರೂ. 50 ಸಾವಿರ ದಂಡ ಮತ್ತು 2 ವರ್ಷದವರೆಗೆ ಜೈಲು ಶಿಕ್ಷೆಯೊಂದಿಗೆ ರೂ.20 ಸಾವಿರ ಕಾರ್ಪಸ್ ನಿಧಿ ಪಾವತಿಸಬೇಕಾಗುತ್ತದೆ. ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ -1098 ಅಥವಾ 0824-2433131, 2433132, 2437479, 2435343 ಕ್ಕೆ ಕರೆ ಮಾಡಿಬಹುದು ಎಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.
Comments are closed.