ಮಂಗಳೂರು, ಜನವರಿ.15: ಕೇಂದ್ರ ಸರಕಾರವು ಜಾರಿಗೆ ತಂದಿರುವ ಎನ್ಆರ್ಸಿ, ಸಿಎಎ, ಎನ್ಪಿಆರ್ (ಪೌರತ್ವ ತಿದ್ದುಪಡಿ) ಕಾಯ್ದೆ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ನೇತೃತ್ವದಲ್ಲಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಇಂದು (ಜ.15) ಅಪರಾಹ್ನ 2:30ಕ್ಕೆ ನಗರದ ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಶಹಾ ಗಾರ್ಡನ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಂದೋಬಸ್ತ್ಗಾಗಿ 4 ಸಾವಿರಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಇವರೆಲ್ಲರು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ಕೇಂದ್ರೀಯ ಅರೆಸೇನಾ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ರ್ಯಾಪಿಡ್ ಇಂಟರ್ವೆನ್ಶನ್ ವಾಹನ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ. ಸಮಾವೇಶ ನಡೆಯುವ ಮೈದಾನ ಮತ್ತು ಸುತ್ತಲಿನ ಪ್ರದೇಶದಲ್ಲಿಯೇ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.ನಗರದ ಆಯಕಟ್ಟಿನ ಪ್ರದೇಶಗಳಲ್ಲಿಯೂ ಭದ್ರತೆ ಏರ್ಪಡಿಸಲಾಗಿದೆ.
ಬಿಗಿ ಪೊಲೀಸ್ ಭದ್ರತೆ :
ಪ್ರತಿಭಟನಾ ಸಮಾವೇಶದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚ ರಿಕೆ ಕ್ರಮವಾಗಿ ಎಡಿಜಿಪಿ, ಐಜಿಪಿ, 11 ಎಸ್ಪಿ, 18 ಎಎಸ್ಪಿ, 100 ಡಿವೈಎಸ್ಪಿ, 300 ಇನ್ಸ್ಪೆಕ್ಟರ್, 500 ಎಸ್ಸೈ ಸಹಿತ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದ ಎಲ್ಲಾ ಐಜಿಪಿ ವಲಯಗಳಿಂದ ಪೊಲೀಸರು ಆಗಮಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದ ಪೊಲೀಸ್ ಮೈದಾನದಲ್ಲಿ ಭದ್ರತೆಗಾಗಿ ಹೊರ ಜಿಲ್ಲೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳ ರೋಲ್ ಕಾಲ್ ಪರೇಡ್ ನಡೆಸಲಾಗಿದೆ. ನಗರದ ವಿವಿಧ ಕಡೆ ರ್ಯಾಪಿಡ್ ಆಯಕ್ಷನ್ ಫೋರ್ಸ್ ಸಿಬ್ಬಂದಿ ಪಥಸಂಚಲನ ನಡೆಸಿದ್ದಾರೆ. ಕೇಂದ್ರ ಅರೆಸೇನಾ ಪಡೆ ಸಿಬ್ಬಂದಿಯೂ ಆಗಮಿಸಿದ್ದಾರೆ.
ಮಂಗಳವಾರ ಸಂಜೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಮಂಗಳೂರು ಪೊಲೀಸ್ ಆಯುಕ್ತ ಡಾ| ಹರ್ಷ ಜತೆಗಿದ್ದರು.
ಬುಧವಾರ ಸಂಜೆ 6 ಗಂಟೆಯ ವರೆಗೆ ಸಮಾವೇಶ ನಡೆಸಲು ಪರವಾನಿಗೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಮುಗಿಸುವುದಾಗಿ ಆಯೋಜಕರು ಭರವಸೆ ನೀಡಿದ್ದಾರೆ. ಆಯೋಜಕರ ಜತೆ ಎಲ್ಲ ವಿಚಾರಗಳನ್ನು ಚರ್ಚಿಸಿ ನಿಬಂಧನೆಗಳನ್ನು ತಿಳಿಸಿದ್ದು, ಅವರು ಒಪ್ಪಿದ್ದಾರೆ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸಮಾವೇಶ ನಡೆಸುವ ಭರವಸೆ ಕೊಟ್ಟಿದ್ದಾರೆ. ರಾ.ಹೆ.ಯಲ್ಲಿ ಎಂಆರ್ಪಿಎಲ್, ಎನ್ಎಂಪಿಟಿಯ ಟ್ಯಾಂಕರ್ಗಳ ಓಡಾಟವನ್ನು ಬುಧವಾರ ಬೆಳಗ್ಗೆ 8ರಿಂದ ರಾತ್ರಿ 10ರ ವರೆಗೆ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಂಗಳವಾರ ಸಭೆ ನಡೆಸಿದರು. ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ, ಅಗ್ನಿಶಾಮಕ, ಆ್ಯಂಬುಲೆನ್ಸ್ ಸೇರಿದಂತೆ ಅಗತ್ಯ ತುರ್ತು ವಾಹನಗಳನ್ನು ನಿಯೋಜಿಸಲು ಸೂಚಿಸಿದರು.
Comments are closed.