ಕರ್ನಾಟಕ

ತನಗಿಂತ 20 ವರ್ಷ ಚಿಕ್ಕವಳಾದ 3ನೇ ಹೆಂಡತಿಯನ್ನು ಹತ್ಯೆಮಾಡಿ ಅಪಘಾತದ ಕಥೆ ಕಟ್ಟಿ ಸಿಕ್ಕಿಬಿದ್ದ!

Pinterest LinkedIn Tumblr


ಚಾಮರಾಜನಗರ: ಮೂರನೇ ಪತ್ನಿಯನ್ನು ಕೊಲೆಗೈದು ಅಪಘಾತದ ಕಥೆ ಕಟ್ಟಿದ್ದ ಆರೋಪಿ ಪತಿಯೊಬ್ಬನ ಕೃತ್ಯ ಎಂಟು ತಿಂಗಳ ಬಳಿಕ ಬೆಳಕಿಗೆ ಬಂದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಮಸಣಾಪುರದ ಮಮತಾ (22) ಕೊಲೆಯಾದ ಪತ್ನಿ. ಹೊಂಗನೂರು ಗ್ರಾಮದ ಸಿದ್ದರಾಜು (42) ಕೊಲೆಗೈದಿದ್ದ ಪಾಪಿ ಪತಿ. ರಾಮಸಮುದ್ರ ರಸ್ತೆಯಲ್ಲಿ ಎಂಟು ತಿಂಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣವೊಂದನ್ನು ಚಾಮರಾಜನಗರ ಪೊಲೀಸರು ಬೇಧಿಸಿದ್ದಾರೆ. ಈ ಮೂಲಕ ಆರೋಪಿಯ ಕೃತ್ಯ ಬಯಲಾಗಿದೆ.

ಆಟೋ ಚಾಲಕನಾಗಿರುವ ವಿವಾಹಿತ ಸಿದ್ದರಾಜು ತನಗಿಂತ 20 ವರ್ಷದ ಚಿಕ್ಕವಳಾದ ಮಮತಾಳನ್ನು ಪ್ರೀತಿಸಿದ್ದ. ಆದರೆ ಮಮತಾಳಿಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗುತ್ತಿತ್ತು. ಹೀಗಾಗಿ ಆ ಯುವಕನ ಜೊತೆಗೆ ಮಾತನಾಡಿದ್ದ ಸಿದ್ದರಾಜು, ನಾನು ಮಮತಾಳನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿ, ಮಮತಾಳನ್ನ ಬೆಂಗಳೂರಿಗೆ ಕರೆದೊಯ್ದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದ. ಬಳಿಕ ಆಕೆಯನ್ನು ಚಾಮರಾಜನಗರಕ್ಕೆ ಕರೆತಂದು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಸಿದ್ದ.

ಆದರೆ ಸಿದ್ದರಾಜುಗೆ ಅದಾಗಲೇ ಇಬ್ಬರು ಹೆಂಡತಿಯರಿದ್ದ ಕಾರಣ ಮಮತಾಳ ಜೊತೆ ಹೆಚ್ಚಾಗಿ ಇರುತ್ತಿರಲಿಲ್ಲ. ಇದರಿಂದಾಗಿ ಆಗಾಗ್ಗೆ ಮಮತಾ ಮತ್ತು ಸಿದ್ದರಾಜು ನಡುವೆ ಗಲಾಟೆ ನಡೆಯುತ್ತಿತ್ತು. ಕೊನೆಗೆ ಮಮತಾಳನ್ನು ಮುಗಿಸಲು ಸಂಚು ರೂಪಿಸಿದ ಸಿದ್ದರಾಜು, ಆಕೆಯನ್ನು 2019ರ ಮೇ 26ರಂದು ತನ್ನ ಆಟೋದಲ್ಲಿ ಕೂರಿಸಿಕೊಂಡು ಹಲ್ಲೆ ನಡೆಸಿ ಆಟೋದಿಂದ ಹೊರಕ್ಕೆ ತಳ್ಳಿ ಕೊಲೆಗೆ ಯತ್ನಿಸಿದ್ದ. ಹಲ್ಲೆಯಿಂದ ಗಾಯಗೊಂಡ ಮಮತಾಳನ್ನು ತಾನೇ ತನ್ನ ಆಟೋದಲ್ಲಿ ಕರೆದುಕೊಂಡು ಬಂದು ಅಪಘಾತ ಎಂದು ಕಥೆ ಕಟ್ಟಿ ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದ.

ಮಮತಾಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮೃತಪಟ್ಟಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾಗ ಪೊಲೀಸರು, ಮಮತಾಳ ವಿಳಾಸ ಪತ್ತೆ ಹಚ್ಚಿ ಆಕೆಯ ಪೋಷಕರನ್ನು ವಿಚಾರಿಸಿದಾಗ ಆರೋಪಿ ಸಿದ್ದರಾಜು ಕೃತ್ಯ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿ ಸಿದ್ದರಾಜುಗೆ ತೀವ್ರ ಶೋಧ ನಡೆಸಿ ಬಂಧಿಸಿರುವ ಪೊಲೀಸರು, ಆತನನ್ನು ಜೈಲಿಗಟ್ಟಿದ್ದಾರೆ.

Comments are closed.