ಕರ್ನಾಟಕ

ರಾಜ್ಯಾದ್ಯಂತ ‘ದೇಶಿ ಹಾಲು’ ಮಾರಾಟ

Pinterest LinkedIn Tumblr


ಬೆಂಗಳೂರು: ನಾಡಿನೆಲ್ಲೆಡೆ ಮನೆಮಾತಾಗಿರುವ ಕೆಎಂಎಫ್‌ ‘ನಂದಿನಿ’ ಹಾಲು ಹಾಗೂ ಹೈನೋತ್ಪನ್ನಗಳ ಸಾಲಿಗೆ ‘ದೇಶಿ ಹಾಲು’ ಹೊಸ ಸೇರ್ಪಡೆಯಾಗಿದ್ದು, ಗುರುವಾರ ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಪೌಷ್ಟಿಕಾಂಶಗಳ ಆಗರವಾದ ಈ ಹಾಲಿಗೆ ಬೆಂಗಳೂರಿಗರು ಮನಸೋತಿದ್ದಾರೆ. ಕೆಲ ತಿಂಗಳಿಂದ ಆಯ್ದ ಪ್ರದೇಶಗಳಲ್ಲಿಮಾತ್ರ ಪ್ರಾಯೋಗಿಕ ಮಾರಾಟಕ್ಕೆ ಸೀಮಿತವಾಗಿದ್ದ ದೇಶಿ ಹಾಲು ಗುರುವಾರದಿಂದ ನಗರದೆಲ್ಲೆಡೆ ಲಭ್ಯವಾಗಲಿದೆ. ಮಾಲ್‌, ಸೂಪರ್‌ ಮಾರ್ಕೆಟ್‌ ಹಾಗೂ ಆಯ್ದ ನಂದಿನಿ ಪಾರ್ಲರ್‌ಗಳಲ್ಲೂ ಗ್ರಾಹಕರ ಕೈಸೇರಲಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಮಾರಾಟ ವಿಸ್ತರಣೆಗೆ ಕೆಎಂಎಫ್‌ ನಿರ್ಧರಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ಹಾಗೂ ಮಾಗಡಿ ತಾಲೂಕಿನ ಕೆಲ ಹಳ್ಳಿಗಳ 1500 ರೈತರಿಗೆ ಕೆಎಂಎಫ್‌ ವತಿಯಿಂದಲೇ ‘ಹಳ್ಳಿಕಾರ್‌’ ತಳಿಯ ರಾಸುಗಳನ್ನು ವಿತರಿಸಲಾಗಿದೆ. ಇವುಗಳ ಸಾಕಣೆಗೆ ರೈತರು ಮುತುವರ್ಜಿ ವಹಿಸಿದ್ದು, ಅವರಿಂದಲೇ ನಿತ್ಯ 2000 ಲೀ. ಹಾಲನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ‘ಬಮೂಲ್‌’ ಘಟಕದಲ್ಲಿ ಸಂಸ್ಕರಿಸಿ ಪ್ಯಾಕಿಂಗ್‌ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಬೆಂಗಳೂರು ಒಂದರಲ್ಲೇ 10 ಸಾವಿರ ಲೀ.ಗೆ ಬೇಡಿಕೆ ಇದ್ದು, ಇತರ ನಗರ/ಪಟ್ಟಣಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಸಿದ್ಧತೆ ಆರಂಭಗೊಂಡಿದೆ.

ಲೀ. ಹಾಲು ದರ 75 ರೂ.: ದೇಶಿ ಹಾಲು ಇತರ ಸಾಮಾನ್ಯ ಹಾಲಿಗಿಂತ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ವಿಟಮಿನ್‌-‘ಎ’, ‘ಡಿ’ ಜತೆಗೆ ಲ್ಯಾಕ್ಟೊಫೆರಿನ್‌ ಜೀವಸತ್ವವನ್ನು ಹೊಂದಿದೆ. ಲ್ಯಾಕ್ಟೊಫೆರಿನ್‌ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ನ್ಯೂರಾನ್‌ ಅಂಶವು ಮೆದುಳು ಪ್ರಚೋದಕವಾಗಿ ವರ್ತಿಸುವುದರಿಂದ ಈ ಹಾಲು ವ್ಯಕ್ತಿಯ ಆರೋಗ್ಯವರ್ಧಕ ಎನಿಸಿಕೊಂಡಿದೆ. ಇದರಿಂದಾಗಿ ಲೀ. ಹಾಲನ್ನು 75 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂಥದ್ದೇ ಹಾಲಿಗೆ ಖಾಸಗಿ ಕಂಪನಿಗಳು 100 ರೂ. ಪಡೆಯುತ್ತಿವೆ. ಕಡಿಮೆ ಬೆಲೆಗೆ ಗ್ರಾಹಕರಿಗೆ ದೇಶಿ ಹಾಲು ತಲುಪಿಸುವುದರಿಂದ ಬಳಕೆದಾರರ ಮನಗೆಲ್ಲಲಿದ್ದೇವೆ ಎನ್ನುತ್ತಾರೆ ಕೆಎಂಎಫ್‌ ಅಧಿಕಾರಿ ವರ್ಗ.

ಕರ್ನಾಟಕದ ದೇಶಿ ತಳಿಗಳಿವು
ದೇವಣಿ, ಮಲೆನಾಡ ಗಿಡ್ಡ, ಕಿಲಾರ್‌, ಅಮೃತಮಹಲ್‌, ಹಳ್ಳಿಕಾರ್‌, ಕೃಷ್ಣವ್ಯಾಲಿ

ಕಡಿಮೆ ಇಳುವರಿ, ಹೆಚ್ಚು ಆದಾಯ
ಮಿಶ್ರ ತಳಿ ಹಸುಗಳಿಂದ ದೇಶಿ ತಳಿಯ ಹಸುಗಳು ಕಡಿಮೆ ಪ್ರಮಾಣದ ಹಾಲನ್ನು ನೀಡುತ್ತವೆ. ದಿನಕ್ಕೆ 2-3 ಲೀ. ಹಾಲು ಮಾತ್ರ ಸಿಗುವುದಿದ್ದರೂ, ದರ ಮೂರು ಪಟ್ಟು ಹೆಚ್ಚಿರುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸಲಿದ್ದು, ಮುಂದಿನ ದಿನಗಳಲ್ಲಿ6 ಲೀ. ಹಾಲು ಕೊಡುವ ಹಸುಗಳನ್ನು ವಿತರಿಸಲು ಕೆಎಂಎಫ್‌ ಚಿಂತನೆ ನಡೆಸಿದೆ.

ದೇಶಿ ತಳಿಯ ಹಾಲಿಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಸಂಸ್ಥೆಯು ಸಂಗ್ರಹಿಸಿದ ಮಾಹಿತಿಯಿಂದ ನಮಗೆ ಉತ್ತೇಜನ ದೊರೆತಿದ್ದು, ರಾಜ್ಯಾದ್ಯಂತ ಹಂತ- ಹಂತವಾಗಿ ವಿಸ್ತರಿಸಲಾಗುವುದು.
-ಬಿ.ಪಿ.ಸತೀಶ್‌, ಕೆಎಂಎಫ್‌ ಎಂಡಿ

ಸಾಮಾನ್ಯ ಹಾಲಿಗಿಂತ ದೇಶಿ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿರುತ್ತವೆ. ವಿಟಮಿನ್‌-‘ಎ’, ‘ಡಿ’ ಜತೆಗೆ ಇತರ ಅಂಶಗಳು ಆರೋಗ್ಯವರ್ಧಕ ಎನಿಸಿದೆ. ಉಷ್ಣ ವಲಯದ ಮನುಷ್ಯರ ಬೆಳವಣಿಗೆಗೆ ಬೇಕಾದ ಅಂಶಗಳು ದೇಶಿ ಹಾಲಿನಲ್ಲಿದೆ.
-ಕೆ.ಪಿ.ರಮೇಶ್‌, ನಿರ್ದೇಶಕರು, ಎನ್‌ಡಿಆರ್‌ಐ (ಬೆಂಗಳೂರು ವಿಭಾಗ)

Comments are closed.