ಕರಾವಳಿ

ಪರ್ಯಾಯ ಪೀಠಾರೋಹಣಗೈಯುವ ಶ್ರೀಅದಮಾರು ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು

Pinterest LinkedIn Tumblr

ಉಡುಪಿ: ಶ್ರೀಕೃಷ್ಣಮಠದಲ್ಲಿ ಜ. 18ರ ಬೆಳಗ್ಗೆ ಶ್ರೀಕೃಷ್ಣನ ಪೂಜಾಕೈಂಕರ್ಯದ ದೀಕ್ಷೆ ತೊಡುವ ಶ್ರೀಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಪೂರ್ವಾಶ್ರಮದ ಹೆಸರು ಶ್ರೀಶ. ಹಿರಿಯಡಕ ಸಮೀಪ ಶೀರೂರಿನವರಾದ ಶ್ರೀಶ ಎಸ್‌. ಅವರು ಎಂಜಿನಿಯರಿಂಗ್‌ ಪದವಿಯನ್ನು ಓದಿದವರು. ಇವರ ತಂದೆ ತಾಯಿ ಚಂದ್ರಶೇಖರ್‌ ಎಸ್‌. ಮತ್ತು ಗೌರಿ. ಆರ್ಥಿಕವಾಗಿ ಮಧ್ಯಮವರ್ಗದವರಾದ ಶ್ರೀಶ ಅವರು 1985ರ ಮಾರ್ಚ್‌ 20ರಂದು ಜನಿಸಿದರು. ಚಂದ್ರಶೇಖರ್‌ ಅವರು ತೀರ್ಥಹಳ್ಳಿಯಲ್ಲಿ ಹೊಟೇಲ್‌ ಉದ್ಯಮ ನಡೆಸುತ್ತಿದ್ದ ಕಾರಣ ತೀರ್ಥಹಳ್ಳಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ಶಿಕ್ಷಣ ಪಡೆದರು. ಶಿವಮೊಗ್ಗದ ಜವಾಹರಲಾಲ್‌ ನೆಹರು ನ್ಯಾಶನಲ್‌ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ 2006ರಲ್ಲಿ ಬಿಇ (ಮೆಕ್ಯಾನಿಕಲ್‌) ಪದವಿ ಪಡೆದರು.

ಅವರು ಉಡುಪಿ, ಮಂಗಳೂರಿನಲ್ಲಿ ಉದ್ಯೋಗವನ್ನೂ ಮಾಡಿದ್ದರು. ಆಧುನಿಕ ಶಿಕ್ಷಣವನ್ನು ಪಡೆದರೂ ಆಧ್ಯಾತ್ಮಿಕ ಜ್ಞಾನದತ್ತ ಆಕರ್ಷಣೆಯಾದ ಕಾರಣ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಲ್ಲಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಕೋರಿದರು. ಹಿರಿಯ ಶ್ರೀಪಾದರು ಕೆಲವು ವರ್ಷ ಶ್ರೀಶರಿಗೆ ಹೆಸರಾಂತ ವಿದ್ವಾಂಸ, ಉಡುಪಿ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಪಡುಬಿದ್ರಿ ಲಕ್ಷ್ಮೀನಾರಾಯಣ ಶರ್ಮರಲ್ಲಿ ಪಾಠದ ವ್ಯವಸ್ಥೆಯನ್ನು ಮಾಡಿದರು. ಶರ್ಮರ ಬಳಿ ವ್ಯಾಕರಣ, ಮಹಾಭಾರತ ತಾತ್ಪರ್ಯನಿರ್ಣಯ, ಅಮರಕೋಶ ಮೊದಲಾದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಾಥಮಿಕ ಪಾಠಗಳನ್ನು ಕೇಳಿದರು. ಉಡುಪಿ ಅದಮಾರು ಮಠದಲ್ಲಿದ್ದು ಗಣಪತಿ ಆಚಾರ್ಯರಿಂದ ವಿಷ್ಣುತಣ್ತೀನಿರ್ಣಯ ಕುರಿತು ಪಾಠವನ್ನು ಕೇಳಿದರು. ಸ್ವತಃ ಶ್ರೀವಿಶ್ವಪ್ರಿಯತೀರ್ಥರೂ ಕೆಲವು ಪಾಠಗಳನ್ನು ಮಾಡಿದ್ದರು.

2014ರ ಜುಲೈ 19ರಂದು 29 ವರ್ಷ ಪ್ರಾಯದ ಶ್ರೀಶರಿಗೆ ಪಾಜಕ ಸಮೀಪದ ಅದಮಾರು ಮಠದ ಆಡಳಿತಕ್ಕೆ ಒಳಪಟ್ಟ ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸನ್ಯಾಸಾಶ್ರಮ, ಉತ್ತರಾಧಿಕಾರಿಯಾಗಿ ನೇಮಿಸಲಾಯಿತು. ಆಗ ಗುರುಗಳು ಕೊಟ್ಟ ಹೆಸರು ಶ್ರೀಈಶಪ್ರಿಯತೀರ್ಥರು. ಅಷ್ಟಮಠಗಳಲ್ಲಿ ಆಧುನಿಕ ಉನ್ನತ ಶಿಕ್ಷಣ ಪಡೆದು ಸನ್ಯಾಸ ಸ್ವೀಕರಿಸಿದ ಮೊದಲಿಗರು ಈಶಪ್ರಿಯತೀರ್ಥರಾಗಿದ್ದಾರೆ.

ಪಲಿಮಾರು ಮಠದ ಶ್ರೀವಿದ್ಯಾ ಧೀಶತೀರ್ಥ ಶ್ರೀಪಾದರಲ್ಲಿ ಶಾಸ್ತ್ರಪಾಠವನ್ನು ಓದುತ್ತಿದ್ದಾರೆ. ಈಗಷ್ಟೇ ಪರ್ಯಾಯ ಸಂಚಾರದ ಅವಧಿ ಹೊರತುಪಡಿಸಿದರೆ ನಾಲ್ಕು ವರ್ಷಗಳಿಂದಲೂ ಪಾಠ ಓದುತ್ತಿದ್ದಾರೆ. ಇನ್ನೆರಡು ವರ್ಷ ಕಾಲ ಶ್ರೀಕೃಷ್ಣಮಠದಲ್ಲಿರುವಾಗಲೂ ಪಲಿಮಾರು ಮಠಾಧೀಶರು ಉಡುಪಿಯಲ್ಲಿದ್ದು ಪಾಠವನ್ನು ಮುಂದುವರಿಸಲಿದ್ದಾರೆ. ಪರ್ಯಾಯ ಮಠದ ಆಡಳಿತವನ್ನೂ ಕಿರಿಯರೇ ನೋಡಿಕೊಳ್ಳುವುದಾಗಿ ಘೋಷಿಸಿದ್ದ ಹಿರಿಯ ಶ್ರೀಪಾದರು ಇತ್ತೀಚಿಗಷ್ಟೇ ಪರ್ಯಾಯ ಪೀಠಾರೋಹಣವನ್ನೂ ಕಿರಿಯರೇ ನೋಡಿಕೊಳ್ಳುವುದಾಗಿ ತಿಳಿಸಿದರು.

ಅದರಂತೆಯೇ ನಾಳೆ ಜ. 18ರ ಮುಂಜಾನೆ ಅವರು ಸರ್ವಜ್ಞ ಪೀಠಾ ರೋಹಣಗೈಯುವರು.

Comments are closed.