ರಾಷ್ಟ್ರೀಯ

ಕೇರಳ ಪ್ರವಾಸೋದ್ಯಮ ಇಲಾಖೆಯಿಂದ ಬೀಫ್ ಖಾದ್ಯದ ಜಾಹೀರಾತು: ಬಿಜೆಪಿ, ವಿಹೆಚ್ ಪಿ ಕಿಡಿ

Pinterest LinkedIn Tumblr


ತಿರುವನಂತಪುರಂ: ಮಕರ ಸಂಕ್ರಾಂತಿ ಹಬ್ಬದಂದು ಕೇರಳ ಪ್ರವಾಸೋದ್ಯಮ ಇಲಾಖೆ ಬೀಫ್ ಖಾದ್ಯದ ಜಾಹೀರಾತನ್ನು ನೀಡುವ ಮೂಲಕ ವಿವಾದಕ್ಕೊಳಗಾಗಿದ್ದು, ಬಿಜೆಪಿ ಮತ್ತು ವಿಶ್ವಹಿಂದೂ ಪರಿಷತ್ ಈ ಜಾಹೀರಾತಿಗೆ ಆಕ್ರೋಶ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.

ಕೇರಳ ಪ್ರವಾಸೋದ್ಯಮ ಇಲಾಖೆ ಜನವರಿ 15ರಂದು ತನ್ನ ಟ್ವೀಟರ್ ಖಾತೆಯಲ್ಲಿ, ರುಚಿಯಾದ ಬೀಫ್ ಖಾದ್ಯ ಸಮರ್ಪಿಸುತ್ತಿದ್ದೇವೆ. ಸಾಂಬಾರ ಪದಾರ್ಥಗಳು, ತೆಂಗಿನಕಾಯಿ ತುರಿ ಹಾಗೂ ಕರಿಬೇವಿನ ಸೊಪ್ಪಿನ ಜತೆ ಸಣ್ಣ ಉರಿಯಲ್ಲಿ ರೋಸ್ಟ್ ಮಾಡಿರುವ ಉಲರ್ತಿಯತ್ತು ಬೀಫ್ ಅತ್ಯಂತ ಉತ್ಕ್ರಷ್ಟವಾದ ಖಾದ್ಯವಾಗಿದೆ. ಇದು ಕೇರಳ ನಾಡಿನ ನೈಜ ರುಚಿ ಹೊಂದಿರುವ ಖಾದ್ಯ ಎಂದು ಉಲ್ಲೇಖಿಸಿತ್ತು.

ಈ ಜಾಹೀರಾತಿಗೆ ಪ್ರತಿಕ್ರಿಯೆ ನೀಡಿರುವ ವಿಎಚ್ ಪಿಯ ವಿನೋದ್ ಬನ್ಸಾಲ್, ಇದು ಗೋವನ್ನು ಪೂಜೆಸುವವರಿಗೆ ಕೇರಳ ಸರ್ಕಾರ ಮಾಡಿದ ಅವಮಾನವಾಗಿದೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೇರಳ ಪ್ರವಾಸೋದ್ಯಮ ಸಚಿವಾಲಯದ ಈ ಟ್ವೀಟ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಒಂದು ವೇಳೆ ಕೇರಳ ಸರ್ಕಾರ ಪ್ರವಾಸೋದ್ಯಮ ಅಥವಾ ಬೀಫ್ ಖಾದ್ಯದ ಬಗ್ಗೆ ಪ್ರಚಾರ ನಡೆಸುತ್ತಿದೆಯೇ ಎಂದು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ನಾನು ಈ ಟ್ವೀಟ್ ಅನ್ನು ಕೇರಳ ಗವರ್ನರ್ ಹಾಗು ಗೃಹ ಸಚಿವಾಲಯಕ್ಕೆ ಕಳುಹಿಸಿದ್ದು, ಕೇರಳ ಟ್ವೀಟರ್ ಹ್ಯಾಂಡಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಅಲ್ಲದೇ ಕೇರಳ ಸರ್ಕಾರ ಕ್ಷಮೆಯಾಚಿಸಬೇಕೆಂದು ಆಗ್ರಹಿಸುವುದಾಗಿ ಬನ್ಸಾಲ್ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಪ್ರವಾಸೋದ್ಯಮ ಸಚಿವ ಕೆ.ಸುರೇಂದ್ರನ್ ಅವರು, ಕೇರಳ ರಾಜ್ಯದಲ್ಲಿ ಯಾರೊಬ್ಬರು ಆಹಾರ ಮತ್ತು ಧರ್ಮದ ಜತೆ ಸಂಬಂಧ ಹೊಂದಿಲ್ಲ. ಕೇರಳ ಸರ್ಕಾರ ಕೂಡಾ ಯಾರೊಬ್ಬರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇರಾದೆ ಹೊಂದಿಲ್ಲ. ಆದರೆ ಯಾರೋ ಕೆಲವರು ಇದನ್ನೆಲ್ಲಾ ಕೋಮುಪ್ರಚೋದನೆಗಾಗಿ ಮಾಡುತ್ತಿದ್ದಾರೆ. ನಮ್ಮ ವೆಬ್ ಸೈಟ್ ನಲ್ಲಿ ಈಗಾಗಲೇ ಪೋರ್ಕ್ (ಹಂದಿ) ಚಿತ್ರ ಕೂಡಾ ಹಾಕಿದ್ದೇವೆ. ಬಹುಶಃ ಅವರು ಆ ಚಿತ್ರವನ್ನು ಗಮನಿಸಿಲ್ಲ ಅಂತ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Comments are closed.