ನವದೆಹಲಿ : ಕೆಪಿಸಿಸಿ ಅಧ್ಯಕ್ಷ ಕಾರ್ಯಧ್ಯಕ್ಷರ ಕಗ್ಗಂಟು ಇಂದು ಬಗೆಹರಿಯುವ ಲಕ್ಷಣಗಳು ಕಂಡು ಬಂದಿದೆ. ಇಂದು ಸಂಜೆ ವೇಳೆಗೆ ಎಐಸಿಸಿಯಿಂದ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ನಾಲ್ಕು ಮಂದಿ ಕಾರ್ಯಧ್ಯಕ್ಷರ ಜೊತೆ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಹೈಕಮಾಂಡ್ ಚಿಂತಿಸಿದ್ದು ಪ್ರಾಂತ್ಯವಾರು ಸಮುದಾಯದ ಆಧಾರದ ಮೇಲೆ ನೇಮಕವಾಗಲಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಐದು ಮಂದಿ ಕಾರ್ಯಧ್ಯಕ್ಷರನ್ನು ಕಾಂಗ್ರೆಸ್ ನೇಮಕ ಮಾಡಿದೆ. ಕೊಂಕಣ್ ಮತ್ತು ಪುಣೆ, ನಾಗ್ಪುರ, ನಾಸಿಕ್, ಔರಂಗಬಾದ್ ಹಾಗೂ ಅಮರಾವತಿ ಪ್ರಾಂತ್ಯಗಳಿಗೆ ಒಂದೊಂದು ಕಾರ್ಯಧ್ಯಕ್ಷ ಸ್ಥಾನ ನೀಡಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಉತ್ತರ ಕರ್ನಾಟಕ ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ, ಮೈಸೂರು ಪ್ರಾಂತ್ಯಗಳಿಗೆ ಒಂದೊಂದು ಕಾರ್ಯಧ್ಯಕ್ಷ ಸ್ಥಾನ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಡಿ.ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದ್ದು ಉತ್ತರ ಕರ್ನಾಟಕದಿಂದ ಲಿಂಗಾಯತ ಸಮುದಾಯದ ಈಶ್ವರ ಖಂಡ್ರೆ, ಮುಂಬೈ ಕರ್ನಾಟಕದಿಂದ ಎಸ್ಟಿ ಸಮುದಾಯದ ಸತೀಶ್ ಜಾರಕಿಹೊಳಿ, ಮೈಸೂರು ಭಾಗಕ್ಕೆ ಎಸ್ಸಿ ಸಮುದಾಯದಿಂದ ಧ್ರುವ ನಾರಯಣ್ ಅಥವಾ ಮಹಾದೇವಪ್ಪ ಕರಾವಳಿ ಕರ್ನಾಟಕ ಭಾಗದಿಂದ ಮುಸ್ಲಿಂ ಕೋಟಾದಡಿ ಯುಟಿ ಖಾದರ್ ಅವರನ್ನ ಕಾರ್ಯಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಪ್ರತಿಪಕ್ಷ ಹಾಗೂ ಶಾಸಕಾಂಗ ನಾಯಕನಾಗಿ ಸಿದ್ದರಾಮಯ್ಯ ಮುಂದುವರಿಕೆ ಸಾಧ್ಯತೆ ಇದ್ದು ಒಂದು ವೇಳೆ ಶಾಸಕಾಂಗ ಪಕ್ಷದ ನಾಯಕ ಬದಲಿಯಾದರೆ ಅದು ಪರಮೇಶ್ವರ ಅಥವಾ ಎಂ.ಬಿ ಪಾಟೀಲ್ ಅವರಿಗೆ ನೀಡುವ ಸಾಧ್ಯತೆಯಿದೆ.
ಬಹುತೇಕ ಪಟ್ಟಿ ಅಂತಿಮವಾಗಿದ್ದು ಸೋನಿಯಗಾಂಧಿ ಅವರಿಂದ ಗ್ರೀನ್ ಸಿಗ್ನಲ್ ಬಾಕಿಯಿದೆ. ಸಂಜೆ ವೇಳೆಗೆ ಈ ಪಟ್ಟಿ ಅಂತಿಮವಾಗಬಹುದು. ಕೆಲವೊಮ್ಮೆ ಹೆಸರು ಬದಲಾದರೂ ಅಚ್ಚರಿ ಇಲ್ಲ ಎನ್ನುತ್ತಿವೆ ಕಾಂಗ್ರೆಸ್ ಮೂಲಗಳು.
Comments are closed.