ಕರ್ನಾಟಕ

ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಮುಸ್ಲಿಂ ಮಹಿಳಾ ಮೇಯರ್ ಆಗಿ ತಸ್ನಿಮ್ ಆಯ್ಕೆ

Pinterest LinkedIn Tumblr

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಮುಕ್ತಾಯವಾಗಿದ್ದು, ಒಪ್ಪಂದದಂತೆ ಮೈತ್ರಿ ಪಕ್ಷಗಳು ಮೇಯರ್ ಉಪಮೇಯರ್ ಸ್ಥಾನಕ್ಕೇರಿವೆ. ಇಂದು ಮೈಸೂರು ಪಾಲಿಕೆಯಲ್ಲಿ ಎರಡು ಅಪರೂಪದ ಘಟನೆ ನಡೆದಿದ್ದು, ವಿರೋಧವನ್ನೆ ವ್ಯಕ್ತಪಡಿಸದ ಬಿಜೆಪಿ ವಿಭಿನ್ನ ನಡೆ ಅನುಸರಿಸದರೆ. ಇತ್ತ ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಮುಸ್ಲಿಂ ಮಹಿಳಾ ಮೇಯರ್ ಆಗಿ ತಸ್ನಿಮ್ ಆಯ್ಕೆಯಾಗಿದ್ದು ಮೈಸೂರು ಪಾಲಿಕೆಗೆ ಹೊಸ ಭಾಷ್ಯ ಬರೆದಿದೆ.

ಪ್ರತಿಷ್ಠಿತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ವರ್ಕ್ಔಟ್ ಆಗಿದ್ದು, ಮುಂದುವರೆದ ಮೈತ್ರಿಯಲ್ಲಿ ಜೆಡಿಎಸ್ಗೆ ಮೇಯರ್ ಸ್ಥಾನ ಸಿಕ್ಕಿದ್ರೆ ಕಾಂಗ್ರೆಸ್ ಉಪಮೇಯರ್ ಸ್ಥಾನ ಧಕ್ಕಿದೆ. ಒಪ್ಪಂದದಂತೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಮೇಯರ್ ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಚುನಾವಣಾ ಪ್ರಕ್ರಿಯೆ ವೇಳೆ ಜೆಡಿಎಸ್ನಿಂದ ವಾರ್ಡ್ ನಂ 26ರ ಸದಸ್ಯೆಯಾಗಿರುವ ತಸ್ನಿಮ್ ಒಟ್ಟು 47 ಮತಗಳನ್ನ ಪಡೆದರೆ, ಬಿಜೆಪಿ ಮೇಯರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೀತಶ್ರೀ ಯೋಗಾನಂದ್ರ ಪರ 23 ಮತಗಳು ಚಲಾವಣೆಯಾದವು. ಅದೆ ರೀತಿ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾರ್ಡ್ ನಂ 38 ರ ಕಾಂಗ್ರೆಸ್ ಪಾಲಿಕೆ ಸದಸ್ಯ ಶ್ರೀಧರ್ ಸಿ. ಪರ 47 ಮತ ಚಲಾವಣೆಯಾದ್ರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಂತಮ್ಮ ವಡಿವೇಲು ಪರ 23 ಮತ ಚಲಾವಣೆಯಾದವು.

ವಿಶೇಷವೆಂದರೆ ಯಾವ ಅಭ್ಯರ್ಥಿಯ ವಿರುದ್ದವೂ ಒಂದೇ ಒಂದು ಮತ ಚಲಾವಣೆಯಾಗಲಿಲ್ಲ. ಸಭಾಂಗಣದಲ್ಲಿ ಹಾಜರಿದ್ದ ಸದಸ್ಯರು ಹಾಗೂ ಜನಪ್ರತಿನಿಧಿಗಳು ತಮ್ಮ ತಮ್ಮ ಅಭ್ಯರ್ಥಿ ಪರ ಮಾತ್ರ ಮತ ಚಲಾವಣೆ ಮಾಡಿ ಅಚ್ಚರಿ ಮೂಡಿಸಿದರು. ವಿರೋಧವೇ ಇಲ್ಲದೆ 22ನೇ ಪಾಲಿಕೆ ಅವಧಿಗೆ 33ನೇ ಮೇಯರ್ ಆಗಿ ತಸ್ನಿಮ್ ಆಯ್ಕೆಯಾದರೆ, ಉಪಮೇಯರ್ ಸ್ಥಾನಕ್ಕೆ ಶ್ರೀಧರ್.ಸಿ ಆಯ್ಕೆಯಾದರು. ಪಾಲಿಕೆ ಇತಿಹಾಸದಲ್ಲೆ ಮೊದಲ ಮುಸ್ಲಿಂ ಮಹಿಳಾ ಮೇಯರ್ ಆದ ತಸ್ನಿಮ್ ಮೈಸೂರು ನಗರ ಅಭಿವೃದ್ದಿಗೆ ಉಪಮೇಯರ್ ಹಾಗೂ ಪಾಲಿಕೆ ಸದಸ್ಯರ ಜೊತೆಗೂಡಿ ಶ್ರಮಿಸುತ್ತೇವೆ ಎಂದು ಹೇಳಿದ್ರು. ಮೇಯರ್ಗೆ ಮಾಜಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧಿಕಾರ ಹಸ್ತಾಂತರಿಸಿ ಶುಭಾಶಯ ಹೇಳಿದರು.

ಇದಕ್ಕೂ ಮುನ್ನ ಕಾಂಗ್ರೆಸ್ ಮಖಂಡ ಕೃಷ್ಣಭೈರೇಗೌಡ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಗೊಂದಲ ಇಲ್ಲದೆ ಚುನಾವಣೆ ನಡೆಸುವಂತೆ ಪಾಲಿಕೆ ಸದಸ್ಯರಿಗೆ ಸೂಚನೆ ನೀಡಿದ್ದರು. ಅಭ್ಯರ್ಥಿಗಳ ಜೊತೆಗೂಡಿ ನಾಮಪತ್ರ ಸಲ್ಲಿಸಿ ಎಲ್ಲರು ಒಮ್ಮತದಿಂದ ಮೇಯರ್ ಉಪಮೇಯರ್ ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಕಳೆದ ವರ್ಷ ಮಾಡಿಕೊಂಡಿದ್ದ ಒಪ್ಪಂದದಂತೆ ಮೈತ್ರಿ ಮುಂದುವರೆದಿದ್ದು ಜೆಡಿಎಸ್ ಮೇಯರ್ ಸ್ಥಾನ ಹಾಗೂ ಕಾಂಗ್ರೆಸ್ಗೆ ಉಪಮೇಯರ್ ಸ್ಥಾನ ಸಿಗಲಿದೆ. ಈ ಮೈತ್ರಿ ಮೈಸೂರಿನ ಪಾಲಿಕೆಗೆ ಮಾಡಿಕೊಂಡಿದ್ದ ಮೈತ್ರಿಯಾಗಿದ್ದು, ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ ಎಂದು ಕಾಂಗ್ರೆಸ್ನ ಕೃಷ್ಣಭೈರೇಗೌಡ ಹಾಗೂ ಜೆಡಿಎಸ್ನ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಇನ್ನು ಕೊನೆ ಘಳಿಗೆಯಲ್ಲಿ ಪಾಲಿಕೆ ಆವರಣಕ್ಕೆ ಬಂದ ಮಾಜಿ ಸಚಿವ ಜಿಟಿಡಿ ಮೇಯರ್ ಚುನಾವಣೆಯಲ್ಲಿ ಮತಹಾಕಲು ಬಂದಿದ್ದೇನೆ, ಸಾ.ರಾ.ಮಹೇಶ್ ನಮ್ಮ ವರಿಷ್ಠರು ಅವರ ಮನವಿ ಮೇರೆಗೆ ಪಾಲಿಕೆಗೆ ಬಂದಿದ್ದೇನೆ ಎಂದು ಹೇಳಿ ಸಾ.ರಾ.ಮಹೇಶ್ಗೆ ಟಾಂಗ್ ನೀಡಿದ್ರು. ಅಲ್ಲದೆ ಸಭಾಂಗಣದ ಒಳಗೆ ಬಿಜೆಪಿ ಅಭ್ಯರ್ಥಿಗಳಿಗೆ ನಾಮಪತ್ರ ವಾಪಸ್ ತೆಗೆದುಕೊಂಡು ಅವಿರೋಧವಾಗಿ ಆಯ್ಕೆ ಮಾಡೋಣ ಎಂದು ಸಲಹೆ ಸಹ ನೀಡಿದ್ದು ವಿಶೇಷವಾಗಿತ್ತು. ಇನ್ನು ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ಗೈರಾದ ಬಿಜೆಪಿ-ಕಾಂಗ್ರೆಸ್ ಜನಪ್ರತಿನಿಧಿಗಳು ಇಂದು ಮತದಾನದಿಂದ ವಂಚಿತರಾದರು. ಬಿಜೆಪಿಯಿಂದ ಸಂಸದ ಪ್ರತಾಪ್ಸಿಂಹ, ಶಾಸಕರಾದ ಎಸ್.ಎ.ರಾಮದಾಸ್ ಗೈರಾಗಿದ್ದರೆ, ಕಾಂಗ್ರೆಸ್ನಿಂದ ತನ್ವೀರ್ ಸೇಠ್ ಗೈರಾಗಿದ್ದರು.ಒಟ್ಟಾರೆ ನಿರೀಕ್ಷೆಯಂತೆ ನಡೆದ ಮೈಸೂರು ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಯಾವುದೇ ಗೊಂದಲ ಗದ್ದಲವಿಲ್ಲದೆ ಶಾಂತವಾಗಿ ಮುಕ್ತಾಯವಾಗಿದೆ. ವಿರೋಧವನ್ನೇ ವ್ಯಕ್ತಪಡಿಸದೆ ಪಾಲಿಕೆ ಸದಸ್ಯರು ಸುಮ್ಮನಿದ್ದದು ಹಾಗೂ ಮೊದಲ ಮುಸ್ಲಿಂ ಮಹಿಳೆ ಮೇಯರ್ ಪಟ್ಟಕ್ಕೇರಿದ್ದು ಇಂದಿನ ಚುನಾವಣೆಯಿಂದ ಇತಿಹಾಸದಲ್ಲಿ ದಾಖಲಾಗಿದೆ.

Comments are closed.