ಅಂತರಾಷ್ಟ್ರೀಯ

ಕರೋನಾ ವೈರಸ್‌ ಹೇಗೆ ಹರಡುತ್ತದೆ? ಎಚ್ಚರಿಕೆ ಕ್ರಮಗಳೇನು?

Pinterest LinkedIn Tumblr


ಕರೋನಾ ವೈರಸ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಾಗೂ ಇಡೀ ಜಗತ್ತನ್ನೇ ಆಪೋಷಣೆ ಪಡೆಯಲು ಹೊಂಚು ಹಾಕಿ ಕಾಯುತ್ತಾ ಕುಳಿತಿರುವ ಒಂದು ಸಾಂಕ್ರಾಮಿಕ ಮಾರಕ ಕಾಯಿಲೆ. ನಮ್ಮ ಭಾರತದಲ್ಲಿ ಅಷ್ಟಾಗಿ ಕಂಡು ಬರದಿದ್ದರೂ ನೆರೆ ರಾಷ್ಟ್ರ ಚೀನಾದಲ್ಲಿ ಇದು ತನ್ನ ಅಟ್ಟಹಾಸ ಮೆರೆದಿದೆ. ಸುಮಾರು 150 ಜನರಿಗೆ ಈಗಾಗಲೇ ವುಹಾನ್ ವೈರಸ್ ತನ್ನ ಪ್ರಭಾವ ತೋರಿ ಸ್ವರ್ಗದ ಬಾಗಿಲು ತಟ್ಟಿಸಿದೆ. ನಮ್ಮ ಭಾರತದಲ್ಲಿ ಒಂದೆರಡು ಪ್ರಕರಣಗಳು ದಾಖಲಾಗಿವೆ. ಮೊದಲೇ ಸಾಂಕ್ರಾಮಿಕ ಜಾತಿಗೆ ಸೇರಿದ ವೈರಸ್ ಆಗಿರುವುದರಿಂದ ನಮ್ಮ ಸುತ್ತಮುತ್ತಲಿರುವ ಜನರ ಜೊತೆಗೆ ನಾವು ಕೂಡ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಏನಿದು ಕರೋನಾ ವೈರಸ್?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋರೋನ ವೈರಸ್ ಕೇವಲ ಸಣ್ಣ ಶೀತ ಮತ್ತು ನೆಗಡಿಯಿಂದ ಪ್ರಾರಂಭವಾಗಿ ಶ್ವಾಸಕೋಶಕ್ಕೆ ತೊಂದರೆ ಉಂಟು ಮಾಡುವ ವೈರಸ್ ಗಳ ಜಾತಿಗೆ ಸೇರಿದೆ. ಈ ವೈರಸ್ ಗಳು ಸಹಜವಾಗಿಯೇ ಪ್ರಾಣಿಗಳಿಂದ ಮನುಷ್ಯರಿಗೆ ವರ್ಗಾವಣೆಗೊಳ್ಳುತ್ತವೆ. ಮೊಟ್ಟ ಮೊದಲನೆಯದಾಗಿ ಈ ವೈರಸ್ ನ ಮೂಲ ಸ್ಥಾನ ಚೈನಾ ದೇಶದ ವುಹಾನ್ ಎಂಬ ಪ್ರದೇಶದ ಸಮುದ್ರಾಹಾರ ಮಾರುಕಟ್ಟೆ. ಆದ್ದರಿಂದಲೇ ಇದಕ್ಕೆ ಕರೋನಾ ವೈರಸ್ ಎಂಬ ಹೆಸರಿದೆ. ಇಲ್ಲಿಂದ ಪ್ರಾರಂಭಗೊಂಡ ವೈರಸ್ ದಾಳಿ ಕೇವಲ ಕೆಲವೇ ದಿನಗಳಲ್ಲಿ ಮನುಷ್ಯನ ದೇಹ ಸೇರಿ ದ್ವಿಗುಣಗೊಂಡು ಇತರರಿಗೂ ಹರಡಿ ಈಗ ನೆರೆ ರಾಷ್ಟ್ರಗಳಿಗೂ ತನ್ನ ರುಚಿ ತೋರಿಸಿದೆ.

ಕರೋನಾ ವೈರಸ್ ನ ಗುಣ ಲಕ್ಷಣಗಳು
ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ ಈ ಕಾಯಿಲೆಯ ಗುಣ ಲಕ್ಷಣಗಳು ಥೇಟ್ ನ್ಯೂಮೋನಿಯ ರೋಗದ ಗುಣ ಲಕ್ಷಣಗಳನ್ನು ಹೋಲುತ್ತವೆ. ಜ್ವರ, ಕೆಮ್ಮು, ಶೀತ, ಉಸಿರುಗಟ್ಟಿದಂತಾಗುವುದು ಮತ್ತು ಉಸಿರಾಡಲು ಕಷ್ಟವಾಗುವುದು. ಈ ಯಾವುದಾದರೂ ಲಕ್ಷಣಗಳು ಕಂಡು ಬಂದಿದ್ದೇ ಆದರೆ ದಯವಿಟ್ಟು ಎಚ್ಚರಿಕೆಯಿಂದಿರಿ ಮತ್ತು ತಕ್ಷಣ ವೈದ್ಯರನ್ನು ಭೇಟಿಯಾಗಿ. ಏಕೆಂದರೆ ಈ ವೈರಸ್ ನ ಗುಣ ಲಕ್ಷಣಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ಮೊದಲು ಸಂಪೂರ್ಣ ಶ್ವಾಸಕೋಶವನ್ನು ಆವರಿಸುತ್ತದೆ. ಆದರೆ ಇದುವರೆಗೂ ಯಾವ ರೋಗಿಗಳಿಗೂ ಗಂಟಲು ನೋವು ಕಾಣಿಸಿಕೊಂಡಿಲ್ಲ. ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ಈ ವೈರಸ್ ದಾಳಿಗೆ ಬಲಿಯಾಗಿರುವವರು ನ್ಯೂಮೋನಿಯ ರೋಗಕ್ಕೂ ತುತ್ತಾಗಿದ್ದಾರೆ. ಜೊತೆಗೆ severe acute respiratory syndrome ಗುಣ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ವುಹಾನ್ ಕರೋನಾ ವೈರಸ್ ಗೆ ಚಿಕಿತ್ಸೆ?
ಸಾಮಾನ್ಯವಾಗಿ ಇದುವರೆಗೂ ಈ ವೈರಸ್ ದಾಳಿಯಿಂದ ಬರುವ ರೋಗಕ್ಕೆ ಯಾವುದೇ ಔಷಧಿ ಇಲ್ಲ. ಕೇವಲ ತಡೆಗಟ್ಟುವಿಕೆ ಒಂದೇ ನಮ್ಮ ನಿಮ್ಮೆಲ್ಲರಿಗೂ ಉಳಿದಿರುವ ಮಾರ್ಗ. ವೈರಸ್ ಪೀಡಿತ ರೋಗಿಯನ್ನು ಇತರ ಜನರಿಂದ ಬೇರ್ಪಡಿಸಿ ಚಿಕಿತ್ಸೆ ಒದಗಿಸಬಹುದು ಅಷ್ಟೇ. ಇದು ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾದ ಕಾಯಿಲೆಯಾಗಿದೆ ಇರುವುದರಿಂದ ಇಲ್ಲಿ ಆಂಟಿ ಬಯೋಟಿಕ್ ಔಷಧಿಗಳು ಕೆಲಸ ಮಾಡುವುದಿಲ್ಲ. ಜ್ವರಕ್ಕೆ ಪ್ಯಾರಸಿಟಮಾಲ್ ಔಷಧವನ್ನು ತೆಗೆದುಕೊಳ್ಳಬಹುದು. ವೈದ್ಯರೂ ಸಹ ಕೇವಲ ಈ ಕಾಯಿಲೆಯ ಗುಣ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಅಷ್ಟೇ. ಸಂಪೂರ್ಣ ಕಾಯಿಲೆಯನ್ನು ವಾಸಿ ಮಾಡುವ ಔಷಧಿಯು ಇನ್ನೂ ತಯಾರಾಗಿಲ್ಲ. ಕಾಯಿಲೆ ವಿಪರೀತವಾದಾಗ ರೋಗಿಗೆ ಲೈಫ್ ಸಪೋರ್ಟ್ ನ ಅವಶ್ಯಕತೆ ಉಂಟಾಗಬಹುದು. ಕೊನೆಯ ಕ್ಷಣಗಳಲ್ಲಿ ವುಹಾನ್ ಕೊರೊನ ವೈರಸ್ ಮೂತ್ರ ಪಿಂಡಗಳ ಹಾನಿ ಉಂಟು ಮಾಡಿ ಕೊನೆಗೆ ಸಾವನ್ನು ತಂದು ಕೊಡಬಹುದು. ಸಂಶೋಧಕರು ಈ ವಿಷಯದಲ್ಲಿ ಔಷಧಿ ಕಂಡು ಹಿಡಿಯುವ ಹಾದಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಎಚ್ಚರಿಕೆ ಕ್ರಮಗಳೇನು?
ನೆರೆಯ ಚೀನಾ ರಾಷ್ಟ್ರದಲ್ಲಿ ಈಗಾಗಲೇ ಸರಿ ಸುಮಾರು 150 ಕ್ಕೂ ಹೆಚ್ಚು ಬಲಿ ಪಡೆದಿರುವ ಈ ಮಾರಕ ಕಾಯಿಲೆ ಸುಮಾರು 4000 ಜನರಿಗೆ ತಗುಲಿದೆ. ತನ್ನ ಇರುವಿಕೆಯನ್ನು ಸಾಬೀತು ಪಡಿಸಲು ಇತರ ರಾಷ್ಟ್ರಗಳಿಗೂ ಹಬ್ಬುತ್ತಲೇ ಇದೆ. ಮೊದಲು ಪ್ರಾಣಿಗಳಿಂದ ಮನುಷ್ಯರಿಗೆ ಈ ವೈರಸ್ ವರ್ಗಾವಣೆ ಯಾಗುತ್ತದೆ ಎಂದು ಸೂಚಿಸಿದ್ದ ವಿಜ್ಞಾನಿಗಳು ಈಗಿನ ಬೆಳವಣಿಗೆಯನ್ನು ಗಮನಿಸಿ ಮನುಷ್ಯರಿಂದ ಮನುಷ್ಯರಿಗೆ ಈ ವೈರಸ್ ವರ್ಗಾವಣೆಗೊಂಡು ಸಾವಿನ ಸಂಖ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ. ಒಂದು ಆಶ್ಚರ್ಯಕರ ವಿಷಯವೆಂದರೆ ಈ ರೋಗದ ಯಾವುದೇ ಗುಣ ಲಕ್ಷಣಗಳನ್ನು ಹೊಂದಿರದ ವ್ಯಕ್ತಿಗಳಲ್ಲಿ ಕೂಡ ವುಹಾನ್ ಕೊರೊನ ವೈರಸ್ ಪತ್ತೆಯಾಗಿದೆ.

ಇದಕ್ಕೆ ಕಾರಣ ಇದು ಸಂಪೂರ್ಣವಾಗಿ ದೇಹವನ್ನು ಆವರಿಸಿಕೊಳ್ಳಲು ಇರುವ 14 ದಿನಗಳ ಕಾಲಮಿತಿ. ಆದ್ದರಿಂದ ನಿಮ್ಮ ಸುತ್ತಮುತ್ತ ಇರುವ ಜನರಲ್ಲಿ ಮೇಲಿನ ಗುಣ ಲಕ್ಷಣಗಳು ಕಂಡು ಬಂದರೆ ಅವರಿಗೆ ಎಚ್ಚರಿಸಿ ನೀವು ಎಚ್ಚೆತ್ತುಕೊಂಡು ವೈದ್ಯರ ಭೇಟಿಗೆ ಸೂಚಿಸಿ. ಈ ವೈರಸ್ ನ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆ ಹಾಕಲು ವಿಶ್ವ ಆರೋಗ್ಯ ಸಂಸ್ಥೆ ಕೆಲವೊಂದು ಮೂಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳನ್ನು ಇಂದಿನ ಈ ಲೇಖನದಲ್ಲಿ ಟಿಪ್ಸ್ ಗಳಾಗಿ ಓದುಗರಿಗೆ ನೀಡಿದ್ದೇವೆ.

ಸ್ವಚ್ಛತೆಯನ್ನು ಕಾಪಾಡಿ
ಯಾವುದೇ ಒಂದು ಸಾಂಕ್ರಾಮಿಕ ಕಾಯಿಲೆಯನ್ನು ಬರದಂತೆ ತಡೆಯಲು ಕೈಗೊಳ್ಳಬೇಕಾದ ಮೊದಲ ಕ್ರಮ ಎಂದರೆ ಅದು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡುವುದು. ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆಗೆ ನಾವೂ ಕೂಡ ಸ್ವಚ್ಛವಾಗಿರುವುದು ಬಹು ಮುಖ್ಯ. ಮೊದಲು ನಿಮ್ಮ ಕೈಗಳನ್ನು ಬಿಸಿ ನೀರಿನಿಂದ ಮತ್ತು ಸೋಪು ಉಪಯೋಗಿಸಿ ಚೆನ್ನಾಗಿ ತೊಳೆದುಕೊಳ್ಳಿ. ಕೇವಲ ಊಟ ಮಾಡುವ ಅಥವಾ ತಿಂಡಿ ತಿನ್ನುವ ಮುಂಚೆ ಈ ಕೆಲಸವನ್ನು ಸೀಮಿತಗೊಳಿಸದೆ ಆದಷ್ಟು ಪ್ರತಿ ಬಾರಿ ಆಗಾಗ ಕೈ ತೊಳೆದುಕೊಳ್ಳಿ. ಇದು ಕರೋನಾ ವೈರಸ್ ಹರಡದಂತೆ ತಡೆಗಟ್ಟುವ ಮೊದಲ ಹೆಜ್ಜೆ.

ಜನ ಜಂಗುಳಿಯ ಪ್ರದೇಶದಿಂದ ದೂರವಿರಿ
ಇದು ನೀವು ಅನುಸರಿಸಲೇಬೇಕಾದ ಎರಡನೇ ದಿಟ್ಟ ಹೆಜ್ಜೆ. ವಿಜ್ಞಾನಿಗಳು ಸೂಚಿಸಿರುವಂತೆ ಕರೋನಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವ ಲಕ್ಷಣವನ್ನು ಹೊಂದಿದೆ. ಆದ್ದರಿಂದ ನಮ್ಮ ಸುತ್ತ ಮುತ್ತ ಓಡಾಡುವ ಜನರಲ್ಲಿ ಯಾರಿಗೆ ಈ ವೈರಸ್ ಈಗಾಗಲೇ ತಗುಲಿದೆ ಎಂದು ಕಂಡು ಹಿಡಿಯುವುದು ಕಷ್ಟ. ಹೊರಗಡೆ ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನೆಮಾ ಇತ್ಯಾದಿ ಪ್ರದೇಶಗಳಿಗೆ ಹೊರಡುವ ಮುಂಚೆ ಮುಖಕ್ಕೆ ಮಾಸ್ಕ್ ಧರಿಸಿ ಪ್ರಯಾಣಿಸಲು ಸಿದ್ದರಾಗಿ. ಇದು ನಿಮಗೆ ರಕ್ಷಣೆ ನೀಡುತ್ತದೆ ಮತ್ತು ಮನೆಗೆ ಬಂದ ನಂತರ ಮೊದಲು ನಿಮ್ಮ ಬಟ್ಟೆಗಳನ್ನು ಬದಲಿಸಿ ಅವುಗಳನ್ನು ವಾಶ್ ಮಾಡಿ ಜೊತೆಗೆ ನೀವು ಕೂಡ ನಿಮ್ಮ ದೈಹಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.

ಜ್ವರ ಮತ್ತು ಕೆಮ್ಮು ಹೊಂದಿರುವ ಜನರಿಂದ ದೂರ ಇರಿ
ಒಂದು ವೇಳೆ ಯಾರಿಗಾದರೂ ಜ್ವರ ಅಥವಾ ಉಸಿರಾಟದ ತೊಂದರೆ ಇರುವುದು ನಿಮ್ಮ ಗಮನಕ್ಕೆ ಬಂದರೆ ಆದಷ್ಟು ಅವರಿಂದ ದೂರ ಇರುವುದು ಒಳ್ಳೆಯದು. ಇದು ವೈರಲ್ ಕಾಯಿಲೆ ಆಗಿರುವುದರಿಂದ ಸೋಂಕಿತ ವ್ಯಕ್ತಿಯ ಜೊತೆಗಿನ ಹತ್ತಿರದ ಸಂವಹನ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ನಿರ್ದಿಷ್ಟವಾಗಿ ಯಾರಿಗೆ ವುಹಾನ್ ಕೋರೋ ವೈರಸ್ ತಗುಲಿದೆ ಎಂದು ಗೊತ್ತಿಲ್ಲದೇ ಇರುವುದರಿಂದ ಯಾವ ಜನರು ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವವರೋ ಅವರಿಂದ ದೂರವಿರುವುದು ಒಳ್ಳೆಯದು.

ಅರ್ಧಂಬರ್ಧ ಬೇಯಿಸಿದ ಮಾಂಸ ತಿನ್ನಬೇಡಿ
ಕೆಲವು ಮಾಂಸಹಾರಿಗಳು ಅರ್ಧಂಬರ್ಧ ಬೇಯಿಸಿದ ಮಾಂಸ ಅಥವಾ ಬೇಯಿಸದೇ ಇರುವ ಮಾಂಸವನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಅಭ್ಯಾಸ ಈಗ ಬೇಡ. ಯಾವುದೇ ಮಾಂಸ ಅಥವಾ ಪೌಲ್ಟ್ರಿ ಉತ್ಪನ್ನಗಳನ್ನು ಚೆನ್ನಾಗಿ ಬೇಯಿಸಿ ನಂತರ ಸೇವಿಸಬೇಕು. ಅಹಂಕಾರ ವೈರಸ್ ಹಾವಳಿ ಹೆಚ್ಚಾಗಿರು ವುದರಿಂದ ಮಾಂಸಗಳನ್ನು ಶುಚಿ ಮಾಡದೆ ತಿನ್ನಬಾರದು. ವಿಶೇಷವಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಿದೇಶಿ ಮಾಂಸವನ್ನು ಮುಟ್ಟಲೇಬಾರದು. ಏಕೆಂದರೆ ಈ ಕಾಯಿಲೆ ಪ್ರಾಣಿಗಳಿಂದ ಮನುಷ್ಯರು ಮತ್ತು ಮನುಷ್ಯರಿಂದ ಮನುಷ್ಯರಿಗೆ ಹರಡುವ ವಿಶೇಷ ಸಾಂಕ್ರಾಮಿಕ ರೋಗ. ಆದ್ದರಿಂದ ತಿಂದ ಮೇಲೆ ಪಶ್ಚಾತಾಪ ಪಡುವುದಕ್ಕಿಂತ ಮೊದಲೇ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Comments are closed.