ಮಂಗಳೂರು/ ಸುರತ್ಕಲ್, ಫೆಬ್ರವರಿ.07: ಸುರತ್ಕಲ್ ಸಮೀಪದ ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗು ಅಷ್ಟಪವಿತ್ರ ನಾಗಾಮಂಡಲೋತ್ಸವ ಜರಗಲಿದೆ.
ಈಗಾಗಲೇ ಜನವರಿ 30ರಿಂದ ಬ್ರಹ್ಮಕಲಶಾಭಿಷೇಕ ಸಂಬಂಧ ಪೂಜಾ ವಿಧಿ ವಿಧಾನ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಫೆಬ್ರವರಿ 7ರಂದು ಶುಕ್ರವಾರ ಪೂರ್ವಾಹ್ನ 9.30ರಿಂದ 9.45ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ರಾತ್ರಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮದ್ದೂರು, ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಫೆಬ್ರವರಿ 9ರಂದು ಭಾನುವಾರ ಶ್ರೀ ಪಿಲಿಚಾಮುಂಡಿ ದೈವದ ಧರ್ಮನೇಮೋತ್ಸವ ನಡೆಯಲಿದೆ. ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬ್ರಹ್ಮಕಲಶದ ವಿಧಿ ವಿಧಾನದಲ್ಲಿ ನಡೆಯಲಿದೆ.
31 ಜನವರಿ 2020ರಿಂದ 9 ಫೆಬ್ರವರಿ 2020ರ ವರೆಗೆ ಪ್ರತಿದಿನ ಸಂಜೆ 6ಗಂಟೆಗೆ ಶ್ರೀ ಕ್ಷೇತ್ರ ಇಡ್ಯಾದಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ತದನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇಂದು ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪಾಲ್ಗೊಳ್ಳಲಿರುವರು.
ಪ್ರತಿದಿನ ಭಕ್ತಾದಿಗಳಿಗೆ ನಿರಂತರವಾಗಿ ಉಪಾಹಾರ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸ ಇರುವ ಸದ್ರಿ ದೇವಸ್ಥಾನದ ಹಿಂದಿನ ಜೀಣೋರ್ದ್ಧಾರ ಕಾರ್ಯ 1980ರ ಆಸುಪಾಸಿನಲ್ಲಿ ಜರಗಿದ್ದು, ತದನಂತರ ನವೀಕರಣದ ಕಾರ್ಯಗಳು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆದಿದೆ. ಈ ಹಿಂದೆ 1979ರಲ್ಲಿ 1982ರಲ್ಲಿ ಶ್ರೀ ಮಹಾಗಣಪತಿಯ ನೂತನ ಗರ್ಭಗುಡಿ ನಿರ್ಮಾಣ ಮತ್ತು ಪುನರ್ ಪ್ರತಿಷ್ಠೆ 1991 ಮತ್ತು 2004ರಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ಹಾಗು ನಾಗಮಂಡಲ ಸೇವೆ ಜರುಗಿರುತ್ತದೆ.
ಪ್ರಪ್ರಥಮ ಬಾರಿಗೆ ಧರ್ಮ ನೇಮೋತ್ಸವ :
ಶ್ರೀ ಕ್ಷೇತ್ರ ಒಂಟಿ ದೈವ ಶ್ರೀ ಪಿಲಿಚಾಮುಂಡಿಗೆ ಪ್ರಪ್ರಥಮ ಬಾರಿಗೆ ಧರ್ಮ ನೇಮೋತ್ಸವ ( ಫೆಬ್ರವರಿ.09) ಜರಗುತ್ತಿದ್ದು ಇದೊಂದು ವಿಶೇಷ ಆಕರ್ಷಣೆಯಾಗಿದೆ.
ಈ ಬಾರಿಯ ಬ್ರಹ್ಮಕಲಶ, ನಾಗಮಂಡಲ, ಧರ್ಮನೇಮೋತ್ಸವದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿಯವರು ತಿಳಿಸಿದ್ದಾರೆ.
Comments are closed.