ರಾಷ್ಟ್ರೀಯ

ಪೆಟ್ರೋಲ್, ಡೀಸೆಲ್ ದರ ಮತ್ತೆ ಇಳಿಕೆ

Pinterest LinkedIn Tumblr


ನವದೆಹಲಿ: ಕಳೆದ 15 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದ್ದು, ಪ್ರತಿ ಲೀಟರ್‌ಗೆ ಸುಮಾರು 2 ರೂ. ಕಡಿತಗೊಂಡಿದೆ.

ಜನವರಿ 12ರಿಂದ ಕಚ್ಚಾ ತೈಲದ ಬೆಲೆ ಪದೇ ಪದೇ ಇಳಿಕೆಯಾಗುತ್ತಿರುವ ಪರಿಣಾಮ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗಿಲ್ಲ. ಹೀಗಾಗಿ ಇಂದು ಕೂಡ ಪೆಟ್ರೋಲ್ ಬೆಲೆ 21 ಪೈಸೆ ಹಾಗೂ ಡೀಸೆಲ್ ಬೆಲೆ 24 ಪೈಸೆಯಷ್ಟು ಇಳಿಕೆಯಾಗಿದೆ.

ಕಚ್ಚಾ ತೈಲದ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಒಂದು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‍ಗೆ $55 ಕ್ಕೆ ಇಳಿದಿದೆ. ಇದರ ನೇರ ಪರಿಣಾಮ ಈಗ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕಂಡುಬರುತ್ತಿದೆ.

ಪ್ರತಿ ಲೀಟರ್‌ಗೆ ಎಷ್ಟು ದರ?
ಬೆಂಗಳೂರಿನಲ್ಲಿ ಪೆಟ್ರೋಲ್ ದರ 75.14 ರೂ. ಹಾಗೂ ಡೀಸೆಲ್ ದರ 67.90 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 72.68 ರೂ. ಮತ್ತು ಡೀಸೆಲ್ ದರ 65.68 ರೂ. ಆಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 78.34 ರೂ. ಇದ್ದರೆ, ಡೀಸೆಲ್ 68.84 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 75.51 ರೂ. ಆದರೆ, ಡೀಸೆಲ್ ಪ್ರತಿ ಲೀಟರ್‌ಗೆ 69.37 ರೂ. ಇದೆ.

ದರ ಇಳಿಕೆಗೆ ಕಾರಣವೇನು?
ಕಚ್ಚಾ ತೈಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾ ಮೊದಲನೇಯ ಸ್ಥಾನದಲ್ಲಿದೆ. ಆದ್ರೆ ಇತ್ತೀಚೆಗೆ ಕೊರೊನಾ ವೈರಸ್ ನಿಂದಾಗಿ ಹಲವು ಕೈಗಾರಿಕೆಗಳು ಮುಚ್ಚಿವೆ. ಹಲವು ಕಡೆ ಸಾರಿಗೆ ಸಂಪರ್ಕ ಬಂದ್ ಮಾಡಲಾಗಿದ್ದು, ಹುಬೆ ಪ್ರಾಂತ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದಂತೆ ಸರ್ಕಾರ ನಿಷೇಧ ಹೇರಿದೆ. ಈ ಎಲ್ಲ ಕಾರಣಗಳಿಂದಾಗಿ ಕಚ್ಚಾ ತೈಲದ ಆಮದನ್ನು ಚೀನಾ ಕಡಿಮೆ ಮಾಡಿದೆ. ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದೆ.

Comments are closed.