ಕರಾವಳಿ

ಬೆಂಗಳೂರು-ವಾಸ್ಕೋ ನೂತನ ರೈಲು ಸಂಚಾರ; ಕರಾವಳಿಗರಿಗೆ ಬೆಂಗಳೂರು ಪಯಣವಿನ್ನೂ ಹತ್ತಿರ!

Pinterest LinkedIn Tumblr

ಕುಂದಾಪುರ: ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ವೇಳಾಪಟ್ಟಿ ಮತ್ತು ಹೊಸ ರೈಲಿಗಾಗಿ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ನೀಡಿದ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ಕರಾವಳಿಗಾಗಿ ವಾಸ್ಕೊ-ಬೆಂಗಳೂರು (ವೈಪಿಆರ್- ವಿ.ಎಸ್.ಜಿ.-ವೈಪಿಆರ್) ವಿಶೇಷ ರೈಲಿನ ಕೊಡುಗೆ ನೀಡಿದ್ದಾರೆ. ಈ ರೈಲು ವಾಸ್ಕೋ ಡ ಗಾಮದಿಂದ ಕಾರವಾರ, ಕುಮಟಾ, ಕುಂದಾಪುರ, ಉಡುಪಿ, ಸುರತ್ಕಲ್, ಪಡೀಲ್ ಹಾಗೂ ಸುಬ್ರಮಣ್ಯ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ದಿನನಿತ್ಯ ಸಂಚರಿಸುವ ಈ ನೂತ YPR-VSG ರೈಲು ಪಡೀಲ್‌ ಬೈಪಾಸ್ ಮೂಲಕ ಪ್ರಯಾಣಿಸುವುದರಿಂದ ಮಂಗಳುರು ನಿಲ್ದಾಣ ತೆರಳದೆ ಇರುವ ಕಾರಣಕ್ಕೆ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಕರವಾಳಿ ಕರ್ನಾಟಕದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಶಕಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಇದಕ್ಕೆ ಹಿತರಕ್ಷಣಾ ಸಮಿತಿಗೂ ಅಭಿನಂದನೆ ಎಂದಿದ್ದಾರೆ.

ಪ್ರಯಾಣಿಕರಿಗೆ ಅತಿ ಅನುಕೂಲ!
ವೇಳಾಪಟ್ಟಿ ಪ್ರಕಾರ ಬೆಂಗಳೂರಿನಿಂದ ಸಂಜೆ 6.45ಹೊರಟು ಬೆಳಗ್ಗೆ 5.15ಕ್ಕೆ ಕುಂದಾಪುರ, 4.30ಉಡುಪಿ ಮತ್ತು 10.30ಕ್ಕೆ ವಾಸ್ಕೊ ತಲುಪಲಿದೆ. ವಾಸ್ಕೊ ದಿಂದ ಸಂಜೆ 4.40ಕ್ಕೆ ಹೊರಟು ಕುಂದಾಪುರಕ್ಕೆ ರಾತ್ರಿ 10.55,  ಉಡುಪಿ 11.25, ಬೆಳಗ್ಗೆ 9 ಕ್ಕೆ ಬೆಂಗಳೂರು ತಲುಪಲಿದೆ. ಈಗಾಗಲೇ ಸಂಚರಿಸುತ್ತಿರುವ ಹಳೆಯ ಬೆಂಗಳೂರು ಕಾರವಾರ ರೈಲು ಹಳೆಯ ವೇಳಾಪಟ್ಟಿಯಲ್ಲಿ ಮುಂದುವರೆಯುವುದು ಮತ್ತು ಕರಾವಳಿ ಜನರಿಗೆ ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಎರಡು ರೈಲುಗಳು ಅನುಕೂಲವಾಗಿದೆ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.

ಜನರಿಗೆ ಸದುಪಯೋಗವಾಗಲಿದೆ: ಗಣೇಶ್ ಪುತ್ರನ್
ಹೊಸ ರೈಲು ಘೋಷಣೆಯಾದರೂ ವೇಳಾಪಟ್ಟಿ ಬಗ್ಗೆ ಸಮಿತಿ ತೀವ್ರ ಆಕ್ಷೇಪಿಸಿದ್ದರಿಂದ ನೈರುತ್ಯ ವಲಯ ಸೋಮವಾರ ಸಮಿತಿ ಸದಸ್ಯರ ಹುಬ್ಬಳ್ಳಿ ರೈಲ್ವೆ ವಲಯಕ್ಕೆ ಆಹ್ವಾನಿಸಿದ್ದು, ಸಭೆಯಲ್ಲಿ ರೈಲು ವೇಳಾಪಟ್ಟಿ ಬಗ್ಗೆ ತೀವ್ರ ಪಟ್ಟು ಬಿಡದೆ ಚರ್ಚೆ ನಡೆಯಿತು. ನೈರುತ್ಯ ವಲಯ ಮುಖ್ಯಸ್ಥ ಎ.ಕೆ. ಸಿಂಗ್ ಮತ್ತು ನಿಯಂತ್ರಕ ಹರಿಶಂಕರ್ ವರ್ಮ ನೇತೃತ್ವದಲ್ಲಿ ಸಮಿತಿಗೆ ಹಲವು ತಾಂತ್ರಿಕ ತೊಂದರೆಗಳ ಬಗ್ಗೆ ವಿವರಿಸಿದರು. ಈಗಿನ ವೇಳಾಪಟ್ಟಿ ಇನ್ನೂ ಅನುಕೂಲಕರ ಪರಿಪಕ್ವ ಮಾಡಲಾಗುವುದು ಎಂದು ನೈರುತ್ವ ರೈಲ್ವೆ ಅಧಿಕಾರಿ ಆಶ್ವಾಸನೆ ನೀಡಿದ್ದು, ಸಮಿತಿ ಸದಸ್ಯರು ಸಮ್ಮತಿಸಿದರು. ರೈಲ್ವೆ ಸಭೆಯಲ್ಲಿ ಅಧ್ಯಕ್ಷ ಗಣೇಶ್ ಪುತ್ರನ್, ಕಾರ್ಯದರ್ಶಿ ಪ್ರವೀಣ್ ಹಾಗೂ ಸಂಚಾಲಕ ವಿವೇಕ ನಾಯಕ, ಗೌತಮ್ ಶೆಟ್ಟಿ, ಉತ್ತರಕನ್ನಡ ಸಮಿತಿ ಮತ್ತು ಕೊಂಕಣ ರೈಲ್ವೆ ಸಲಹಾ ಸದಸ್ಯ ರಾಜೀವ ಗಾಂವ್ಕರ್, ಸದಸ್ಯರಾದ ಧರ್ಮಪ್ರಕಾಶ್, ಜೋಯ್ ಕರ್ವೆಲ್ಲೊ ಉಪಸ್ಥಿತರಿದ್ದರು.

ಬೆಂಗಳೂರು-ಗೋವಾ ಪಯಣ ಸಲೀಸು!
ರಾಜಧಾನಿ ಬೆಂಗಳೂರು ಮಾರ್ಗವಾಗಿ ಕರಾವಳಿ ಸೊಬಗಿನ ಮೂಲಕ ರೈಲು ಮಾರ್ಗದಲ್ಲಿ ಗೋವಾ ಸಾಗುವ ಆಸೆ ಹೊತ್ತ ಪ್ರವಾಸಿಗರ ಕನಸು ನನಸಾಗಿಸುವ ಕಾಲ ಇನ್ನೇನು ಸನ್ನಿಹಿತವಾಗಿದೆ. ವಾಸ್ಕೋ- ಬೆಂಗಳೂರು ಮಾರ್ಗವಾಗಿ ಹೊಸ ರೈಲು ಓಡಾಟದಿಂದ ಗೋವಾಕ್ಕೆ ಬೆಂಗಳೂರಿಗರ ಸಂಪರ್ಕ ಕೊಂಡಿ ಇನ್ನಷ್ಟು ಹತ್ತಿರವಾಗಲಿದೆ. ಪ್ರವಾಸೋಧ್ಯಮವು ಹೆಚ್ಚಾಗುವ ಎಲ್ಲಾ ಲಕ್ಷಣಗಳಿದ್ದು ಈ ಸಂಪರ್ಕ ಸೇತು ವ್ಯವಸ್ಥೆಯಿಂದ ಕರಾವಳಿ ಮಂದಿಗೆ ಡಬಲ್ ಧಮಾಕ ಆಗಲಿದೆ.

https://twitter.com/ShobhaBJP/status/1227064934510448640?s=20

ಸಮಿತಿಯಿಂದ ಅಭಿನಂದನೆ…
ಇದು ಸತತ ಹೋರಾಟದ ಫಲವಾಗಿದೆ. ಸಂಘಟಿತ ಪ್ರಯತ್ನ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸುರೇಶ್ ಅಂಗಡಿ ಮತ್ತು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗಡೆ, ಸಚಿವ ಪ್ರಹ್ಲಾದ್ ಜೋಶಿ, ಕುಮಟಾ ಶಾಸಕ ದಿನಕರ್ ಶೆಟ್ಟಿ, ಸಂಸದ ಅನಂತ್ ಕುಮಾರ್ ಹೆಗ್ಡೆ ಮತ್ತು ಸಮಿತಿ ಸರ್ವ ಸದಸ್ಯರಿಗೆ ಅಧ್ಯಕ್ಷ ಗಣೇಶ್ ಪುತ್ರನ್ ಕೃತಜ್ಞತೆ ಸಲ್ಲಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.