ಮಂಗಳೂರು:ಅಂತರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಂಗಳೂರಿನ ಕುಮಾರಿ ಅನಘಾ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಚಿನ್ನದ ಪದಕ ನೀಡಿ ಅಭಿನಂದಿಸಿದರು.
ಐಸ್ ಸ್ಕೇಟಿಂಗ್ ಅನ್ನುವ ಅಪರೂಪದ ಹಾಗೂ ಕಷ್ಟಕರವಾದ ಕ್ರೀಡೆಯಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡು ಚಿನ್ನದ ಪದಕ ಪಡೆದು ನಮ್ಮ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಅನಘಾ ಇನ್ನಷ್ಟು ಸಾಧನೆ ಮಾಡುವಂತೆ ಮಂಜುನಾಥ ಸ್ವಾಮಿ ಹರಸಲಿ ಎಂದು ಅವರು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ,ಅನಘಾ ರ ತಂದೆ ಡಾ.ರಾಜೇಶ್ ಹುಕ್ಕೇರಿ,ತಾಯಿ ಡಾ.ಅನಿತಾ ರಾಜೇಶ್,ಅಜ್ಜಿ ಮೀನಾಕ್ಷಿ ಆರ್ ಪುತ್ರನ್ ಜೊತೆಗಿದ್ದರು.
ಅನಘಾ ಕಳೆದ 2020 ಜನವರಿ 4 ಹಾಗೂ 5 ರಂದು ಸಿಂಗಾಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಐಸ್ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕ ಪಡೆದು ಅತೀ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಪಡೆದ ದೇಶದ ಮೊದಲ ಸ್ಕೇಟರ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅನಘಾ ಈವರೆಗೆ ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 23 ಚಿನ್ನದ ಪದಕ,9 ಬೆಳ್ಳಿ ಹಾಗೂ 6 ಕಂಚಿನ ಪದಕ ಪಡೆದಿದ್ದಾರೆ.ಮಂಗಳೂರಿನ ಅನಘಾ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರಾದ ಡಾ.ರಾಜೇಶ್ ಹುಕ್ಕೇರಿ ಹಾಗೂ ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾದ ಅನಘಾ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಅನಘಾ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ದೆಹಲಿಯಲ್ಲಿ ಐಸ್ ಸ್ಕೇಟಿಂಗ್ ನ ಭಾರತ ತಂಡದ ಕೋಚ್ ಅವಧೂತ್ ಥಾವಡೇ ಅವರಿಂದ ಐಸ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿರುವ ಅನಘಾ, ಮಂಗಳೂರಿನಲ್ಲಿ ಮೋಹನ್ ದಾಸ್.ಕೆ ಹಾಗೂ ಜಯರಾಜ್ ಕುಕ್ಯಾನ್ ಅವರಿಂದ ರೋಲರ್ ಸ್ಕೇಟಿಂಗ್ ತರಬೇತಿ ಪಡೆಯುತ್ತಿದ್ದಾರೆ.
Comments are closed.