ಕರಾವಳಿ

ಮಂಗಳೂರು : ನೂತನ ಮೇಯರ್ ದಿವಾಕರ್ ಪಾಂಡೇಶ್ವರ – ಉಪಮೇಯರ್ ವೇದಾವತಿ ಅಯ್ಕೆ

Pinterest LinkedIn Tumblr

                         ದಿವಾಕರ್ ಪಾಂಡೇಶ್ವರ                                                     ವೇದಾವತಿ ಯಾನೆ ಜಾನಕಿ

ಮಂಗಳೂರು ಫೆಬ್ರವರಿ 28 : ಮಂಗಳೂರು ಮಹಾನಗರ ಪಾಲಿಕೆಯ 21ನೇ ಅವಧಿಯ ನೂತನ ಮೇಯರ್ ಆಗಿ ಬಿಜೆಪಿಯ ದಿವಾಕರ್ ಪಾಂಡೇಶ್ವರ ಹಾಗೂ ಉಪಮೇಯರ್ ಆಗಿ ಬಿಜೆಪಿಯ ವೇದಾವತಿ ಯಾನೆ ಜಾನಕಿ ಅವರು ಅಯ್ಕೆಯಾಗಿದ್ದಾರೆ. ಈ ಬಾರಿಯ ಪಾಲಿಕೆ ಚುನಾವಣೆಲ್ಲಿ ಬಿಜೆಪಿಯ ದಿವಾಕರ್ ಪಾಂಡೇಶ್ವರ್ ಅವರು ಕಂಟೋನ್ಮೆಂಟ್ ವಾರ್ಟ್ 46ರಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಬಿಜೆಪಿ ಜಾನಕಿ‌ ಯಾನೆ ವೇದಾವತಿ ಅವರು ಕುಳಾಯಿ ವಾರ್ಡ್ 9ರಲ್ಲಿ ಗೆಲುವು ಪಡೆದಿದ್ದರು.

2019ರ ನ.12ರಂದು ಪಾಲಿಕೆ ಚುನಾವಣೆ ನಡೆದು, ನ. 14ರಂದು ಫಲಿತಾಂಶ ಪ್ರಕಟವಾಗಿತ್ತು. ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 44 ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಕಳೆದ ಅವಧಿಯಲ್ಲಿ ಪಾಲಿಕೆಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ 14 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಮೇಯರ್ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಪ್ರಕಟವಾಗಿತ್ತು.

ಮಹಾನಗರ ಪಾಲಿಕೆಯ ಚುನಾವಣೆ ಕಳೆದು ಹಲವು ಸಮಯಗಳು ಕಳೆದರೂ ಮೇಯರ್ ಆಯ್ಕೆ ಪ್ರಕ್ರಿಯೆ ನಡೆದಿರಲಿಲ್ಲ. ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್‌ಗೆ 21ನೆ ಅವಧಿಯ ಮೀಸಲಾತಿಯಡಿ ಚುನಾವಣೆ ನಡೆಸುವಂತೆ ರಾಜ್ಯ ಸರಕಾರ ಪಾಲಿಕೆಗೆ ಸೂಚನೆ ನೀಡಿದ್ದರಿಂದ ಚುನಾವಣೆಗೆ ದಿನಾಂಕ ನಿಗದಿಪಡಿಸಲು ಕೋರಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ಬಳಿಕ ಪ್ರಾದೇಶಿಕ ಆಯುಕ್ತರು ಫೆ.28ಕ್ಕೆ ಮೇಯರ್-ಉಪ ಮೇಯರ್ ಚುನಾವಣೆ ನಡೆಸುವ ಬಗ್ಗೆ ಮಂಗಳೂರು ಪಾಲಿಕೆ ಆಯುಕ್ತರಿಗೆ ಪತ್ರದ ಮೂಲಕ ತಿಳಿಸಿದ್ದರು. ಇದೀಗ ಮೇಯರ್ ಮೀಸಲಾತಿ ಗೊಂದಲದಿಂದ ಕಳೆದ ಮೂರು ತಿಂಗಳಿನಿಂದ ಬಾಕಿಯಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್, ಉಪ ಮೇಯರ್ ಅಯ್ಕೆಗೆ ಇಂದು ಚುನಾವಣೆ ನಡೆಯುವ ಮೂಲಕ ಎಲ್ಲಾ ವಿವಾದಗಳಿಗೆ ತೆರೆ ಬಿದ್ದಿದೆ.

ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ.‌ಯಶವಂತ್ (ಚುನಾವಣಾಧಿಕಾರಿ) ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಆರಂಭಗೊಂಡ ಮಂಗಳೂರು ಮಹಾನಗರಪಾಲಿಕೆ ಮೇಯರ್, ಉಪಮೇಯರ್ ಹಾಗೂ ಸ್ಥಾಯೀ ಸಮಿತಿಗಳ ಚುನಾವಣೆ ಪ್ರಕ್ರಿಯೆ ಮಧ್ಯಾಹ್ನದವರೆಗೂ ನಡೆಯಿತು.

ಅಪರ ಪ್ರಾದೇಶಿಕ ಆಯುಕ್ತರಾದ ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮತ ಚಲಾಯಿಸಿದರು.

ಹೆಚ್ಚಿನ ಚಿತ್ರಗಳನ್ನು ನಿರೀಕ್ಷಿಸಿ..

Comments are closed.