ಕರಾವಳಿ

ಇತಿಹಾಸದಲ್ಲೇ ಪ್ರಥಮ: ಬೈಲೂರು-ಕೊರಂಗ್ರಪಾಡಿ 40 ಫೀಟ್ ಅಗಲ ರಸ್ತೆ ಕಾಮಗಾರಿಗೆ ಚಾಲನೆ

Pinterest LinkedIn Tumblr

ಉಡುಪಿ: ಟಿಡಿಆರ್(ಟ್ರಾನ್ಸ್ ಪರ್ ಆಫ್ ಡೆವಲಪ್ ಮೆಂಟ್ ರೈಟ್) ವ್ಯವಸ್ಥೆ ಅಡಿಯಲ್ಲಿ ಜನರ ಸ್ವ ಇಚ್ಛೆಯಿಂದಲೇ ಬೈಲೂರು-ಕೊರಂಗ್ರಪಾಡಿ ರಸ್ತೆಯ ಅಗಲೀಕರಣಕ್ಕೆ ಚಾಲನೆ ನೀಡಲಾಯಿತು. ಖುದ್ದು ಉಡುಪಿ ಶಾಸಕ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಈ ರಸ್ತೆ ಅಗಲೀಕರಣ ಪ್ರಕ್ರಿಯೆ ಚಾಲನೆ ಸಿಕ್ಕಿದೆ.

ಈ ರಸ್ತೆಗೆ ಅಗತ್ಯವಿದ್ದ ಭೂಮಿಗಾಗಿ ಶಾಸಕರು ಆಸಕ್ತಿ ವಹಿಸಿ ಅವರ ವಿಶೇಷ ಪ್ರಯತ್ನದಿಂದ ಸುಮಾರು 7 ರಿಂದ 8 ಸಭೆಗಳನ್ನು ನಡೆಸಿದ್ದರು. ಭೂಮಾಲೀಕರಲ್ಲಿ ಮನವೊಲಿಸಿ ಅಭಿವೃದ್ಧಿಗಾಗಿ ಸಹಕರಿಸುವಂತೆ ಮನವಿ ಮಾಡಿದ್ದರು. ಪರಿಣಾಮ 40 ಫೀಟ್ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈವರೆಗೆ ಕೇವಲ 15 ಫೀಟ್ ಇದ್ದ ರಸ್ತೆಯನ್ನು 40 ಫೀಟ್ ನಷ್ಟು ಅಗಲೀಕರಣ ಮಾಡಲು ಮುಂದಾಗಿದ್ದು ಇದು ಉಡುಪಿ ನಗರದಲ್ಲೇ ಪ್ರಪ್ರಥಮ ಪ್ರಯತ್ನವಾಗಿದೆ.

ಭೂಮಿಗೆ ಯಾವುದೇ ಹಣ ನೀಡದೆ, ಅಭಿವೃದ್ಧಿಯ ದೃಷ್ಟಿಯಿಂದ ಸ್ವ ಇಚ್ಛೆಯಿಂದ ಸ್ವತಃ ಜನರೇ‌‌ ರಸ್ತೆಗಾಗಿ ಜಮೀನು ನೀಡಿದ್ದರು. ಈ ಕಾರಣಕ್ಕಾಗಿ ಶಾಸಕರು ಭೂಮಿ ನೀಡಿದ ಜನರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ಭೂಮಾಲೀಕರಿಗೆ ಯಾವುದೇ ಪರಿಹಾರ ನೀಡದಿರುವುದರಿಂದ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟಿಡಿಆರ್ ನಿಯಮದಡಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು. ಉಚಿತವಾಗಿ ರಸ್ತೆಗೆ ಬೇಕಾದ ಸ್ಥಳ ನೀಡಲು ಸಹಕರಿಸಿದ ಎಲ್ಲಾ ಭೂಮಾಲೀಕರಿಗೆ ಶಾಸಕರು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.

Comments are closed.