ಲಕ್ನೋ: ಪ್ರೇಯಸಿಯ ಜೊತೆ ಇದ್ದಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಗ್ರಾಮದಲ್ಲಿ ಬೆತ್ತಲಾಗಿ ಮೆರವಣಿಗೆ ಮಾಡಿ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ವ್ಯಕ್ತಿಯನ್ನು ಗ್ರಾಮದಲ್ಲಿ ಬೆತ್ತಲೆ ಮೆರವಣಿಗೆ ಮಾಡುವಾಗ ಅದನ್ನು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.
ಏನಿದು ಪ್ರಕರಣ?
ಹಲ್ಲೆಗೊಳಗಾದ ವ್ಯಕ್ತಿಗೆ ಮದುವೆಯಾಗಿ ಈಗಾಗಲೇ ಮೂವರು ಮಕ್ಕಳಿದ್ದಾರೆ. ಆತನ ಪ್ರಿಯತಮೆಗೂ ಸಹ ಮದುವೆಯಾಗಿದೆ. ಇಬ್ಬರೂ ಒಂದೇ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ವ್ಯಕ್ತಿ ತನ್ನ ಗೆಳತಿಯೊಂದಿಗೆ ಇದ್ದಾಗಲೇ ಪ್ರಿಯತಮೆಯ ಸೋದರ ಮಾವನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದರಿಂದ ಕೋಪಗೊಂಡು ಮಾವ ವ್ಯಕ್ತಿಯನ್ನು ಹಿಡಿದು ಹಲ್ಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದ ವ್ಯಕ್ತಿಗೆ ಪ್ರಿಯತಮೆಯ ಮಾವ ಥಳಿಸಿದ್ದಾನೆ. ಅಷ್ಟೇ ಅಲ್ಲದೇ ಆತನ ಸಹಚರರು ವ್ಯಕ್ತಿಯನ್ನು ಬೆತ್ತಲೆಯಾಗಿ ಹಳ್ಳಿಯ ಬೀದಿಗಳಲ್ಲಿ ಓಡಾಡುವಂತೆ ಕಿರುಕುಳ ನೀಡಿದ್ದಾರೆ. ಕೊನೆಗೆ ಆ ವ್ಯಕ್ತಿ ಬೆತ್ತಲಾಗಿ ಗ್ರಾಮದಲ್ಲಿ ಓಡಾಡಿದ್ದಾನೆ. ಆರೋಪಿಗಳು ಘಟನೆಯ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೇಳೆ ಗ್ರಾಮದವರು ತಡೆಯುವ ಪ್ರಯತ್ನ ಮಾಡದೆ ಸುಮ್ಮನೆ ನೋಡುತ್ತಾ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಮಹಿಳೆಯ ಸಂಬಂಧಿಯೊಬ್ಬರು ಈ ಕುರಿತು ವ್ಯಕ್ತಿಯ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಲಿಖಿತ ದೂರು ಸಲ್ಲಿಸಿದ ನಂತರ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಆದರೆ ಗ್ರಾಮದಲ್ಲಿ ಬೆತ್ತಲೆಯಾಗಿ ನಡೆಯುವಂತೆ ಒತ್ತಾಯಿಸಿ ವ್ಯಕ್ತಿಗೆ ಕಿರುಕುಳ ನೀಡಿದವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ನಾವು ವಿಡಿಯೋವನ್ನು ನೋಡಿದ್ದೇವೆ. ಅದರಲ್ಲಿ ವ್ಯಕ್ತಿಗೆ ಬೆತ್ತಲೆಯಾಗಿ ನಡೆಯಲು ಒತ್ತಾಯಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ನಾವು ಗುರುತಿಸುತ್ತಿದ್ದೇವೆ. ಹೀಗಾಗಿ ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರದೀಪ್ ಕುಮಾರ್ ಹೇಳಿದರು.
Comments are closed.