ಕರ್ನಾಟಕ

ಸುಳ್ಳು ಸುದ್ದಿಯಿಂದ ದಿಢೀರ್ ಭಾರೀ ಇಳಿಕೆ ಕಂಡ ಚಿಕನ್ ಬೆಲೆ

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿ ನಾನ್ ವೆಜ್ ಪ್ರಿಯರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಚಿಕನ್ ಅದ್ರಂತೂ ಎಲ್ಲಿಲ್ಲದ ಪ್ರೀತಿ. ಆದರೆ ಮಹಾಮಾರಿ ಕೊರೊನಾ ವೈರಸ್ ಭಯಕ್ಕೆ ಚಿಕನ್ ಅಂಗಡಿಗಳು ಗ್ರಾಹಕರಿಲ್ಲದೇ ಬಣಗುಡುತ್ತಿವೆ. ಚಿಕನ್ ರೇಟ್ ಕೂಡ ಕುಸಿಯುತ್ತಲೇ ಇದೆ. ಇನ್ನೂ ವ್ಯಾಪಾರ ವಹಿವಾಟು ಇಲ್ಲದೇ ಮಾರಾಟಗಾರರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಚಿಕನ್ ತಿನ್ನುವುದರಿಂದ ಕೊರೊನಾ ವೈರಸ್ ಹರಡುತ್ತದೆ ಎಂದು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುತ್ತಿದೆ. ಇದರೆ ಪರಿಣಾಮ ಚಿಕನ್ ವ್ಯಾಪಾರಿಗಳಿಗೂ ತಟ್ಟಿದೆ. ಹೀಗಾಗಿ 100-130 ರೂ. ಇದ್ದ ಚಿಕನ್ ದರ ಇಂದು 60-70 ರೂ.ಗೆ ಇಳಿದಿದೆ. ಇದರಿಂದ ರಾಜ್ಯದಲ್ಲಿ ಶೇ. 50ರಷ್ಟು ಚಿಕನ್ ಮಾರಾಟ ಕಡಿತವಾಗಿದೆ. ಜೊತೆಗೆ 1 ಕೋಟಿಯಷ್ಟು ಲಾಸ್ ಆಗಿದೆ ಎಂದು ಕುಕ್ಕಟ ಮಂಡಳಿಯವರು ಅಳಲನ್ನು ತೋಡಿಕೊಂಡಿದ್ದಾರೆ.

ಯಾವಾಗ ಕೊರೊನಾ ವೈರಸ್ ಎಂಬ ಮಹಾಮಾರಿ ಬೆಂಗಳೂರಿಗೆ ಬಂದಿರಬಹುದು ಎಂಬ ಸುದ್ದಿಗಳು ಹರಿದಾಡಲು ಆರಂಭವಾಯ್ತೋ, ಆಗಿನಿಂದ ತುಸು ಎಚ್ಚೆತ್ತ ಬೆಂಗಳೂರಿಗರು ಚಿಕನ್ ಅಂಗಡಿಗಳ ಕಡೆ ಮುಖ ಮಾಡೋದನ್ನೆ ಬಿಟ್ಟಿದ್ದಾರೆ. ಜೊತೆಗೆ ಪ್ರತಿ ಕೋಳಿಗೆ 80 ರೂಪಾಯಿ ಸಿಗುತ್ತಿದ್ದ ಸಾಕಾಣಿಕೆಗಾರರಿಗೆ ಸದ್ಯ 30-35 ರೂಪಾಯಿ ಸಿಗುತ್ತಿದೆ. ಇದರಿಂದ ಕೆಲ ಸಾಕಾಣಿಕೆಗಾರರು ಕೋಳಿ ಮೇಲೆ ಖರ್ಚು ಮಾಡಲಾಗದೇ, ಕೋಳಿ ವ್ಯಾಪಾರ ನಿಲ್ಲಿಸಿದ್ದಾರೆ.

ಇತ್ತ ಕೊರೊನಾ ಸೋಂಕಿಗೂ ಚಿಕನ್‍ಗೂ ಯಾವುದೇ ಸಂಬಂಧ ಇಲ್ಲ ಎಂದು ಚಿಕನ್ ಡೀಲರ್ಸ್ ಹೇಳ್ತಿದ್ದಾರೆ. ಆದರೆ ಜನ ಮಾತ್ರ ಮಹಾಮಾರಿಗೆ ಹೆದರಿ ಚಿಕನ್ ಕೊಂಡುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ವ್ಯಾಪಾರಸ್ಥರು ಬೇಸರದಿಂದ ಹೇಳಿಕೊಂಡಿದ್ದಾರೆ. ಈ ರೀತಿ ಕೊರೊನಾ ವೈರಸ್ ಭಯ, ಸುಳ್ಳುಸುದ್ದಿ ಕುಕ್ಕಟ ಉದ್ಯಮದ ಮೇಲೆ ಭಾರೀ ಹೊಡೆತವನ್ನುಂಟು ಮಾಡಿದೆ.

Comments are closed.