ಕರಾವಳಿ

ಕರಾವಳಿ ಮಾರ್ಗವಾಗಿ ಮಾರ್ಚ್ 7ರಿಂದ ಓಡಲಿದೆ ಬೆಂಗಳೂರು-ವಾಸ್ಕೋ ರೈಲು!

Pinterest LinkedIn Tumblr

ಕುಂದಾಪುರ: ಮೂರು ದಿನಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಭಾರತೀಯ ರೈಲ್ವೇಯ ವೇಳಾಪಟ್ಟಿ ಸಮಿತಿ (ಐಆರ್‌ಟಿಸಿ)ಯ ಸಭೆಯಲ್ಲಿ ನೂತನ ಬೆಂಗಳೂರು – ಉಡುಪಿ- ಕುಂದಾಪುರ – ಕಾರವಾರ – ವಾಸ್ಕೋ ರೈಲಿನ ಸಂಚಾರಕ್ಕೆ ಹಸಿರು ನಿಶಾನೆ ಲಭಿಸಿದೆ. ಮಾ. 7ರಂದು ಬೆಂಗಳೂರಿನಲ್ಲಿ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಚಾಲನೆ ನೀಡುವ ಮೂಲಕ ಕರಾವಳಿಗರ ಬಹು ನಿರೀಕ್ಷಿತ ರೈಲು ಸಂಚಾರ ಆರಂಭಿಸಲಿದೆ.

ಶುಕ್ರವಾರ ಸ್ವತಃ ಸಚಿವರೇ ಐಆರ್‌ಟಿಸಿ ಸಭೆಯಲ್ಲಿ ಭಾಗವಹಿಸಿ, ರೈಲು ಸಂಚಾರಕ್ಕೆ ಎದುರಾಗಿದ್ದ ತೊಡಕುಗಳನ್ನು ಪರಿಹರಿಸಿದ್ದು, ಮಾ. 7ರಿಂದ ರೈಲು ಸಂಚರಿಸಲಿದೆ ಎಂದು ಘೋಷಿಸಿದ್ದಾರೆ. ರೈಲು ಮಂಗಳೂರು ಸೆಂಟ್ರಲ್‌ ಮತ್ತು ಜಂಕ್ಷನ್‌ ನಿಲ್ದಾಣಗಳಿಗೆ ತೆರಳದೆ ಪಡೀಲ್‌ ಮಾರ್ಗವಾಗಿ ಸಂಚಾರ ಮುಂದುವರಿಸುವುದರಿಂದ ಉಡುಪಿ ಮತ್ತು ಅದಕ್ಕೆ ಮುಂದಿನ ಭಾಗದ ಪ್ರಯಾಣಿಕರಿಗೆ 2 ತಾಸುಗಳು ಉಳಿತಾಯವಾಗುತ್ತವೆ.

ರೈಲಿನ ಕೋಚ್‌ ಗಳು ಬೆಂಗಳೂರಿಗೆ ಆಗಮಿಸಿ, ವೇಳಾಪಟ್ಟಿ ಪ್ರಕಟವಾಗಿ 15 ದಿನಗಳಾಗಿದ್ದವು. ಆದರೂ ಸಂಚಾರ ಆರಂಭಕ್ಕೆ ಸಂಬಂಧಪಟ್ಟ ರೈಲ್ವೇ ಅಧಿಕಾರಿಗಳು, ಕೊಂಕಣ ರೈಲ್ವೇ ಅಧಿಕಾರಿಗಳು ಸಕಾರಾತ್ಮಕ ಸ್ಪಂದನ ನೀಡದ ಬಗ್ಗೆ ಕರಾವಳಿಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಹಿತರಕ್ಷಣ ಸಮಿತಿ ಸರ್ವ ಯತ್ನ..
ಕರಾವಳಿಗೆ ಈ ಹೊಸ ರೈಲನ್ನು ನೀಡಬೇಕು ಎನ್ನುವ ಪ್ರಸ್ತಾವವನ್ನು ಮೊದಲಿಗೆ ಸಚಿವರ ಮುಂದೆ ಮಂಡಿಸಿದ್ದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮತ್ತು ಕುಮಟಾ ರೈಲ್ವೇ ಯಾತ್ರಿಕರ ಸಂಘ. ರೈಲು ಘೋಷಣೆಯಾದಂದಿನಿಂದ ಹಿತರಕ್ಷಣ ಸಮಿತಿಯು ವೇಳಾಪಟ್ಟಿ, ತಾಂತ್ರಿಕ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿರಂತರ ಶ್ರಮ ವಹಿಸಿದ್ದರಿಂದ ರೈಲು ಸಂಚಾರದ ಹಾದಿ ಸುಗಮಗೊಂಡಿದೆ.

Comments are closed.